

ಮೈಸೂರು: ನಗರದ ಶ್ರೀ ಅವಧೂತ ದತ್ತಪೀಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಜೂ.6 ರಿಂದ 15ರವರೆಗೆ ಸಹಸ್ರ ಚಂಡೀಯಾಗ ಮತ್ತು ವನದುರ್ಗಾ ವೃಕ್ಷ ಶಾಂತಿ ಮಹಾಯಜ್ಞ ಆಯೋಜಿಸಲಾಗಿದೆ ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.
ತ್ರೇತಾಯುಗದಲ್ಲಿ ದಂಡಕಾರಣ್ಯದಲ್ಲಿ ಇಂತಹ ಸಹಸ್ರ ಚಂಡಿಯಾಗ ನಡೆದಿತ್ತು. ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವೃಕ್ಷಗಳು ಇದ್ದ ಹಿನ್ನೆಲೆಯಲ್ಲಿ ಅದು ಸಾಧ್ಯವಾಯಿತು. ಅದು ಹೊರತುಪಡಿಸಿ ಪ್ರಪಂಚದಲ್ಲೇ ಪ್ರಥಮ ಬಾರಿಗೆ ನಮ್ಮ ಆಶ್ರಮದಲ್ಲಿ ಈ ಯಾಗ ನಡೆಯುತ್ತಿದೆ. ವಿವಿಧ ಬಗೆಯ 10 ಸಾವಿರ ವೃಕ್ಷಗಳು ಒಂದೇ ಕಡೆ ಇರುವುದು ಕಷ್ಟ. ಆದರೆ, ನಮ್ಮ ಆಶ್ರಮದಲ್ಲಿ 10 ಸಾವಿರ ಬೋನ್ಸಾಯಿ ಗಿಡಗಳನ್ನು ತರಿಸಿಕೊಂಡು ಈ ಯಾಗ ಮಾಡುತ್ತಿದ್ದೇವೆ. ಕಾಡಿನಲ್ಲೂ ಒಂದೇ ರೀತಿಯ ಗಿಡ ಮರಗಳನ್ನು ಹೆಚ್ಚಾಗಿ ಕಾಣಬಹುದು. ಆದರೆ, ವೈವಿಧ್ಯತೆ ಕಡಿಮೆ. ಆದರೆ, ನಮ್ಮ ಆಶ್ರಯಮದಲ್ಲಿ ವಿವಿಧ ಬಗೆಯ 10 ಸಾವಿರ ವೃಕ್ಷಗಳನ್ನು ಸಂರಕ್ಷಣೆ ಮಾಡಿದ್ದೇವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇಂದಿನ ಮಕ್ಕಳಿಗೆ ಕೆಲವು ಗಿಡ ಮರಗಳ ಪರಿಚಯ ಬಿಟ್ಟರೆ ಅಮೂಲ್ಯ ವೃಕ್ಷಗಳ ಬಗ್ಗೆ ಮಾಹಿತಿ ಇಲ್ಲ. ನಕ್ಷತ್ರ ವೃಕ್ಷ, ನವಗ್ರಹ ವೃಕ್ಷಗಳ ಕುರಿತು ತಿಳಿದಿಲ್ಲ. ಅದಕ್ಕಾಗಿ ಒಂದು ವೃಕ್ಷದ ಮ್ಯೂಸಿಯಂ ಮಾಡಬೇಕು ಎಂಬ ಮಹಾದಾಸೆ ಇತ್ತು. ಅದಕ್ಕೋಸ್ಕರ ತೈವಾನ್, ಇಂಗ್ಲೆಂಡ್, ಜಪಾನ್ ಮತ್ತಿತರ ದೇಶಗಳಿಂದ ಅಮೂಲ್ಯ ಗಿಡಗಳನ್ನು ತರಿಸಿದ್ದೇವೆ. ನಮಗೆ ಕೆಲವರು ಬೋನ್ಸಾಯಿ ಗಿಡಗಳನ್ನು ನೀಡಿದ್ದಾರೆ. ನಾವು ಕೆಲವು ಬೋನ್ಸಾಯಿ ಗಿಡಗಳನ್ನು ಖರೀದಿ ಮಾಡಿದ್ದೇವೆ ಎಂದರು.
ಪಂಚ ಮೂಲಿಕಾ ವನ: ವನದುರ್ಗಾ ವೃಕ್ಷ ಶಾಂತಿ ಮಹಾಯಜ್ಞ ಹಿನ್ನೆಲೆಯಲ್ಲಿ ಮಠದಲ್ಲಿ ಬೋನ್ಸಾಯಿ ಗಿಡಗಳ ಸಂಖ್ಯೆ ಹೆಚ್ಚು ಮಾಡಲಾಯಿತು. ಎಲ್ಲ ಬೋನ್ಸಾಯಿ ಗಿಡಗಳನ್ನು ಬೋನ್ಸಾಯಿ ಗಾರ್ಡನ್‌ನಲ್ಲಿ ಇಡಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಹೊಸದಾಗಿ ‘ಪಂಚ ಮೂಲಿಕ ವನ’ ನಿರ್ಮಾಣ ಮಾಡಲಾಗಿದೆ. ಈ ವನ ಇಂದು ಲೋಕಾರ್ಪಣೆಗೊಂಡಿದೆ. ಈ ಪಂಚಮೂಲಿಕ ವನದಲ್ಲಿ ಸಾಕಷ್ಟು ಜನರು ನೋಡಿರದ ಸಹಸ್ರಾರು ಗಿಡಗಳು ಇವೆ. ಪೂಜೆಗೆ ಅತ್ಯುತ್ಕೃಷ್ಟವಾದ ಗಿಡಮರಗಳು ಇವೆ. ಸಂಜೀವಿನಿಯಂತಹ ಅತ್ಯಮೂಲ್ಯ ವೃಕ್ಷ, ಬೇವು,ಆಲ, ನೆಲ್ಲಿ ವಟವೃಕ್ಷ ಹೀಗೆ ಅನೇಕ ವೃಕ್ಷಗಳನ್ನು ಸಂರಕ್ಷಿಸಲಾಗುತ್ತಿದೆ ಎಂದರು.
ಯಾಗದ ಸಂದರ್ಭದಲ್ಲಿ ಪ್ರತಿ 1000 ವೃಕ್ಷಗಳ ಸಮೂಹವನ್ನು ಎಂಟು ವಿವಿಧ ದೇವತೆಗಳಿಗೆ ಸಮರ್ಪಿಸಲಾಗುತ್ತದೆ. ಗಣಪತಿ, ವಿಷ್ಣು, ಲಲಿತಾ, ಶಿವ, ಸುಬ್ರಹ್ಮಣ್ಯ, ದತ್ತಾತ್ರೇಯ, ಹನುಮಂತ ಮತ್ತು ಸೂರ್ಯದೇವ - ಈ ಎಂಟು ದೇವತೆಗಳ ಸಹಸ್ರನಾಮದ ಪವಿತ್ರ ನಾಮಗಳನ್ನು ಪ್ರತಿಯೊಂದು ವೃಕ್ಷಕ್ಕೂ ಹೆಸರಿಸಲಾಗುತ್ತಿದೆ ಎಂದು ಸ್ವಾಮೀಜಿ ತಿಳಿಸಿದರು.
ಕೇವಲ ಯಜ್ಞ ಮಾಡುವುದು ಮಾತ್ರವಲ್ಲದೆ ಗಿಡ ಮರ ಬೆಳೆಸುವುದು ಸಹ ನಮ್ಮ ಗುರಿಯಾಗಿದೆ. ಇದಕೋಸ್ಕರ ತೆಲಂಗಾಣದಲ್ಲಿ 10, ಆಂಧ್ರದಲ್ಲಿ 15, ಕರ್ನಾಟಕದಲ್ಲಿ 8 ಎಕರೆ ಜಾಗ ಖರೀದಿಸಿ ಗಿಡ ಮರ ಬೆಳೆಸಲು ಉದ್ದೇಶಿಸಿದ್ದೇವೆ. ಪಾಳು ಬಿದ್ದಿರುವ ಈ ಜಾಗಗಳಿಗೆ ನೀರನ್ನು ತೆಗೆದುಕೊಂಡು ಹೋಗಿ ಗಿಡ ಮರಗಳನ್ನು ನೆಟ್ಟು ಬೆಳೆಸಲಾಗುವುದು ಎಂದು ಹೇಳಿದರು.
ನಮ್ಮ ಆಶ್ರಮ ಆಧ್ಯಾತ್ಮದ ಜತೆಗೆ ಸಾಮಾಜಿಕ ಕಾರ್ಯಗಳನ್ನು ತೊಡಗಿದೆ. ನಮ್ಮ ಎಲ್ಲ ದೇವಾಲಯಗಳಲ್ಲಿ ಮಂಗಳಾರತಿಯಿಂದ ಬರುವ ಪ್ರತಿಯೊಂದು ಹಣವನ್ನು ನೆರೆ, ಬರ ಮತ್ತಿತರ ಅವಘಡಗಳಲ್ಲಿ ಸಂತ್ರಸ್ತರಾದವರಿಗೆ ಸಮರ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.