ವಿರಾಜಪೇಟೆಯ ಲ್ಯಾಮ್ ಪ್ಯಾಡ್ ತಂಡ ಪಾರಮ್ಯ

15 vpt 2.1
Published on


ವಿರಾಜಪೇಟೆ : ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಕಳೆದ ಏಳು ದಿನಗಳಿಂದ ನಡೆದ ವಿರಾಜಪೇಟೆ ಕ್ರಿಕೆಟ್ ಹಬ್ಬ 2024 ರಲ್ಲಿ ಲ್ಯಾಮ್ ಪ್ಯಾಡ್ ತಂಡ ಪಾರಮ್ಯ ಮೆರೆದಿದೆ. ಲೀಲಾಕಾನ್ ಮಿಸ್ಟಿ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ವಿಜೇತ ತಂಡಕ್ಕೆ ಮಂಗಳವಾರ ಹಮ್ಮಿಕೊಂಡಿದ್ದ ಸಮಾರೋಪ ಸಮಾರಂಭದಲ್ಲಿ ಒಂದು ಲಕ್ಷ ರೂ. ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು. ರನ್ನರ್ಸ್ ತಂಡಕ್ಕೆ 60 ಸಾವಿರ ರೂ. ನಗದು ಮತ್ತು ಆಕರ್ಷಕ ಟ್ರೋಫಿ ವಿತರಿಸಿ ಕ್ರೀಡಾ ಪಟುಗಳನ್ನು ಗೌರವಿಸಲಾಯಿತು.
ಒಟ್ಟು 12 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಅಂತಿಮವಾಗಿ ಲ್ಯಾಮ್ ಪ್ಯಾಡ್ ತಂಡ ಹಾಗೂ ಲೀಲಾ ಕಾನ್ ಮಿಸ್ಟಿ ತಂಡಗಳು ಫೈನಲ್ ಪ್ರವೇಶಿಸಿದವು. ಅಂತಿಮ ಸೆಣಸಾಟದಲ್ಲಿ ವಿರಾಜಪೇಟೆಯ ಲ್ಯಾಮ್ ಪ್ಯಾಡ್ ತಂಡವು ಬಲಿಷ್ಠ ಲೀಲಾ ಕಾನ್ ಮಿಸ್ಟಿ ತಂಡದ ವಿರುದ್ಧ 10 ರನ್ ಅಂತರದಿಂದ ಗೆದ್ದು ವಿಜಯ ಪತಾಕೆಯನ್ನು ಹಾರಿಸಿತು.
ಉತ್ತಮ ಬೌಲರ್ ಯಾಸಿರ್ ಅರಾಫತ್, ಉತ್ತಮ ವಿಕೆಟ್ ಕೀಪರ್ ಗಿರೀಶ್, ಅತೀ ಹೆಚ್ಚು ವಿಕೆಟ್ ಪಡೆದ ನಾಸಿರ್, ಹೆಚ್ಚು ಸಿಕ್ಸರ್ ಬಾರಿಸಿದ ಶಾರುಕ್ ಅವರಿಗೂ ಪ್ರತ್ಯೇಕ ಬಹುಮಾನ ನೀಡಿ ಸನ್ಮಾನಿಸಲಾಯಿತು. ಭಾಗವಹಿಸಿದ 12 ತಂಡದ ಮಾಲೀಕರಿಗೆ ಅತಿಥಿಗಳು ನೆನಪಿನ ಕಾಣಿಕೆ ನೀಡಿದರು. ವಿರಾಜಪೇಟೆ ನಗರ, ಬಿಟ್ಟಂಗಾಲ, ಕಡಂಗ ಭಾಗದ ತಂಡಗಳು ಉತ್ಸಾಹದಿಂದ ಪಂದ್ಯದಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು.
ಬಾಂಧವ್ಯ ಬೆಸೆಯಲು ಸಹಕಾರಿ: ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿರಾಜಪೇಟೆ ಪುರಸಭಾ ಸದಸ್ಯ ಮಹಮದ್ ರಫಿ ಮಾತನಾಡಿ, ಕ್ರಿಕೆಟ್ ಪಂದ್ಯಾಟವು ವಿವಿಧ ಸಮುದಾಯದವರ ಒಗ್ಗೂಡುವಿಕೆಗೆ ಸಹಕಾರಿಯಾಗಿದೆ ಎಂದರು. ಕ್ರೀಡಾಕೂಟ ಬಾಂಧವ್ಯ ಬೆಸೆದು ವೈಮನಸ್ಯಗಳನ್ನು ನಿವಾರಿಸಲಿದೆ. ಸೋಲು- ಗೆಲುವುಗಳನ್ನು ಸಮಾಜವಾಗಿ ಸ್ವೀಕರಿಸಿ ಸಂಭ್ರಮಿಸೋಣ ಎಂದರು.

ಕ್ರಿಕೆಟ್ ಹಬ್ಬ - ಲೀಲಾಕಾನ್ ಮಿಸ್ಟಿ ತಂಡ ರನ್ನರ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net