ಮಠದ ಪೂಜ್ಯರಿಗೆ ವಚನಗಳೇ ಶ್ರೀರಕ್ಷೆ

jkd 19-2 kirita
ಜಮಖಂಡಿ ನಗರದ ಓಲೆಮಠದಲ್ಲಿ ನೂತನ ಉತ್ತರಾಧಿಕಾರಿಯಾಗಿ ಆನಂದ ದೇವರಿಗೆ ರುದ್ರಾಕ್ಷಿ ಕಿರೀಟ ಧಾರಣೆ ಮಾಡಲಾಯಿತು.
Published on

ಜಮಖಂಡಿ: ಮಠದ ಪೂಜ್ಯರಿಗೆ, ಸ್ವಾಮೀಜಿಗಳಿಗೆ ವಚನಗಳೇ ಶ್ರೀರಕ್ಷೆಯಾಗಿವೆ ಎಂದು ತೋಂಟದಾರ್ಯ ಸಂಸ್ಥಾನಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಹೇಳಿದರು.

ನಗರದ ಓಲೆಮಠದಲ್ಲಿ ಲಿ.ಡಾ. ಅಭಿನವ ಕುಮಾರಚನ್ನಬಸವ ಮಹಾಸ್ವಾಮಿಗಳ ಸ್ಮರಣೋತ್ಸವ-ನುಡಿ ನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮಠದ ಪೀಠ ಅಲಂಕರಿಸುವವರು ತಂದೆ, ತಾಯಿ, ಬಂಧು -ಬಾಂಧವರ ಸಂಬಂಧ ಕಡೆದುಕೊಳ್ಳಬೇಕು. ಜವಾಬ್ದಾರಿಯುತ ಸಮಾಜದ ಮಗುವಾಗಿ ಇರಬೇಕು. ನಾಡಿನಾದ್ಯಂತ ಆಧ್ಯಾತ್ಮ, ಬಸವಾದಿ ಶರಣರ ಆಸಯದಂತೆ ನಡೆಯಬೇಕು ಎಂದರು.

ವಚನಗಳ ಅಧ್ಯಯನ ಮಾಡಬೇಕು. ವಚನಗಳ ಅಧ್ಯಯನದಿಂದ ಜ್ಞಾನ ಹೆಚ್ಚುತ್ತದೆ ಎಂದರು.

ಲಿಂಗಪೂಜೆ, ಸಮಾಜ ಸೇವೆ ಎರಡೂ ಮುಖ್ಯವಾಗಿವೆ. ಶ್ರದ್ಧೆಯಿಂದ ಎರಡೂ ಕಾರ್ಯಗಳನ್ನು ನಿಭಾಯಿಸಬೇಕು ಎಂದರು.

ಲಿಂ. ಡಾ. ಚನ್ನಬಸವ ಸ್ವಾಮೀಜಿ ಅವರು ಸಾಹಿತ್ಯದಲ್ಲಿ ಅಪಾರ ಪಾಂಡಿತ್ಯ ಸಂಪಾಧಿಸಿದ್ದರು, 21ನೇ ಶತಮಾನದ ಆಧುನಿಕ ವಚನಕಾರರಾಗಿದ್ದರು. 12ನೇ ಶತಮಾನದ ನಂತರ 21ನೇ ಶತಮಾನದಲ್ಲಿ ದ್ವಿಪತಿ ಛಂದಸ್ಸಿನಲ್ಲಿ ಕನ್ನಡದಲ್ಲಿ ಮೊಟ್ಟ ಮೊದಲನೆಯದಾಗಿ ಬಸವ ಪುರಾಣ ಬರೆದ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದರು.

ಹಂದಿಗುಂದ ಸಿದ್ಧೇಶ್ವರ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ಶ್ರೀಮಠದಲ್ಲ ಸಾಹಿತ್ಯ ವಿದ್ವತ್ ಪರಂಪರೆಯನ್ನು ಓಲೆಮಠದ ಶ್ರೀಗಳು ಪ್ರಾರಂಭಿಸಿದ್ದಾರೆ. ಮಠಕ್ಕೂ ಭಕ್ತರಿಗೂ ಅವಿನಾಭಾವ ಸಂಬಂಧ ಇದೆ ಎಂದರು.

ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿ, ಸ್ವಾಮಿಗಳು ದಯಾಮಯಿಗಳು, ಮಾನವನ್ನು ಮಹಾಮಾನವನ್ನಾಗಿ, ದೇವ ಮಾನವನ್ನಾಗಿ ಮಾಡುವಷ್ಟು ಜ್ಞಾನ ತ್ಯಾಗ ಇದೆ. ಶ್ರೀಮಠದಲ್ಲಿ ಶ್ರೀಗಳು ರಚಿಸಿರುವ ಅಪಾರ ಗ್ರಂಥಗಳಿಗೆ ಗ್ರಂಥಾಲಯ ನಿರ್ಮಿಸಲು ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.

ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಓಲೆಮಠದ ಶ್ರೀಗಳು ಜಮಖಂಡಿ ಜಿಲ್ಲೆಯಾಗಬೇಕೆಂಬ ಅಭಿಲಾಷೆ ಹೊಂದಿದ್ದರು. ವಿವಿಧ ಹೋರಾಟಗಳಲ್ಲಿಯೂ ಮುಂದೆ ಇರುತಿದ್ದರು. ಜಮಖಂಡಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದರು.

ಓಲೆಮಠದ ನೂತನ ಉತ್ತರಾಧಿಕಾರಿ ಆನಂದ ದೇವರು ಮಾತನಾಡಿ, ಜಮಖಂಡಿ ಓಲೆಮಠಕ್ಕೆ ನಾನು ಹೂ ತರುವ ಕೆಲಸ ಮಾಡುತ್ತೆನೆ, ನಾನು ಜಮಖಂಡಿಯ ಮನೆ ಮಗನಾಗಿ ಸಮಾಜ ಸೇವೆ ಮಾಡುತ್ತೇನೆ. ನನ್ನಲ್ಲಿ ಪೀಠಾಧಿಕಾರಿ ಎನ್ನುವ ಬೇಧ ಇಲ್ಲ. ಮಠಕ್ಕೆ ಲಕ್ಷಾಂತರ ರೂ. ಕೊಡುವುದು ಬೇಡ ನಿವೇಲ್ಲರೂ ಮಠದ ಮೇಲೆ ಲಕ್ಷೃ ಇಡಿ ಎಂದರು.

ಗೌರಿಶಂಕರ ಶಿವಾಚಾರ್ಯರು, ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಕೊಣ್ಣೂರ ಡಾ. ವಿಶ್ವಪ್ರಭುದೇವ ಶಿವಾಚಾರ್ಯ ಶ್ರೀಗಳು, ನಾಗನೂರ ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ, ಡಾ. ಮಹಾಂತಪ್ರಭು ಸ್ವಾಮೀಜಿ ಮಾತನಾಡಿದರು.

ಮರೆಗುದ್ದಿಯ ಡಾ. ನೀರುಪಾದೀಶ್ವರ ಶ್ರೀಗಳು, ಚಿಮ್ಮಡದ ಪ್ರಭು ಸ್ವಾಮೀಜಿ, ಮಹಾಂತ ಸ್ವಾಮೀಜಿ, ಗುರುಮಹಾಂತ ಶ್ರೀಗಳು ಇತರರಿದ್ದರು.

ಸರಸ್ವತಿ ಸಬರದ ವಚನ ಗಾಯನ ಹಾಡಿದರು. ಬಸವರಾಜೇಂದ್ರ ಝುಂಜರವಾಡ ಸ್ವಾಗತಿಸಿ, ನಿರೂಪಿಸಿದರು. ಬೆಳಗ್ಗೆ 5 ರಿಂದ 8.30ರ ವರೆಗೆ ಬಸವ ಕೇಂದ್ರ, ಜಾಗತಿಕ ಲಿಂಗಾಯತ ಮಹಾಸಭಾದ ಅಶೋಕ ಬರಗುಂಡಿ, ರವಿ ಯಡಹಳ್ಳಿ ನೇತೃತ್ವದಲ್ಲಿ ಬಸವಾದಿ ಶರಣರ ಕ್ರಿಯಾ ಸಮಾದಿ ಆವರಣದಲ್ಲಿ ವಚನ ಪಠಣ ಕಾರ್ಯಕ್ರಮ ನಡೆಯಿತು.

ಗದಗ ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ, ಹಂದಿಗುಂದ ಶಿವಾನಂದ ಸ್ವಾಮೀಜಿ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳದ ಆನಂದ ದೇವರಿಗೆ ರುದ್ರಾಕ್ಷಿ ಕಿರೀಟ, ಚಿನ್ನದ ಗುಂಡಗಡಿಗಿ, ಶೀರೋ ವಸ, ತಾಂಡೋಲೆಗಳನ್ನು ಹಸ್ತಾಂತರಿಸುವ ಮೂಲಕ ಉತ್ತರಾಧಿಕಾರಿಯಾಗಿ ನೇಮಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net