

ಯಲಬುರ್ಗಾ: ಬಸವಾದಿ ಶಿವಶರಣರ ಚಿಂತನೆ, ಹಿತನುಡಿ ಅಳವಡಿಸಿಕೊಂಡು ಅನುಷ್ಠಾನಕ್ಕೆ ತರಬೇಕೇ ವಿನಾ ಭಕ್ತಿಯೆಂಬುದು ಡಾಂಬಿಕವಾಗಿರಬಾರದು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಅಮರೇಶಪ್ಪ ಬಳ್ಳಾರಿ ಹೇಳಿದರು.
ತಾಲೂಕಿನ ಮರಕಟ್ ಗ್ರಾಮದ ಶಿವಾನಂದ ಮಠದಲ್ಲಿ ಬಸವಕೇಂದ್ರ ಗುರುವಾರ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ವಚನ ಸಾಹಿತ್ಯದಲ್ಲಿ ಭಕ್ತಿ ಎನ್ನುವ ಚಿಂತನಾಗೋಷ್ಠಿಯಲ್ಲಿ ಮಾತನಾಡಿದರು. ಬಸವಣ್ಣನವರ ವಿಚಾರಗಳನ್ನು ಸಮಾಜದ ತುಂಬೆಲ್ಲ ಪಸರಿಸಬೇಕಾದರೆ, ಬಸವಧರ್ಮ ಬೆಳೆಯಬೇಕಾದರೆ ಶರಣರ ವಚನಗಳ ಚಿಂತನೆ ಮಾಡಬೇಕು. ಅಂದಾಗ ಮಾತ್ರ ಸಮಾಜ ಪರಿವರ್ತನೆಯಾಗಲು ಸಾಧ್ಯ ಎಂದರು.
ರಾಯಚೂರು ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ವೀರಭದ್ರಪ್ಪ ಕುರಕುಂದಿ ಮಾತನಾಡಿ, ದೇವ ಮತ್ತು ಭಕ್ತಿ ಎರಡೂ ಬೇರೆ ಅಲ್ಲ. ಪ್ರದಿಪಾದಿಸುವ ವಿಚಾರಶಕ್ತಿಯೇ ಶಕ್ತಿ. ಸ್ವರ್ಗ, ಸುಖ ಎಲ್ಲವೂ ಇಲ್ಲಿಯೇ ಇವೆ. ಶಿವಧ್ಯಾನ ಮಾಡದೆ ಇರುವ ಮನುಷ್ಯ ಶರಣ ವಿಚಾರ ಅಳವಡಿಸಿಕೊಂಡು ಸಾಗಬೇಕಾಗಿದೆ ಎಂದರು. ಪ್ರಸಾದ ಸೇವೆ ನೆರವೇರಿಸಿದ ಹನುಮಂತಪ್ಪ ಗದ್ದಿ ದಂಪತಿಯನ್ನು ಸನ್ಮಾನಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಹನುಮವ್ವ ದೊಡ್ಡಬಸಪ್ಪ ಮುಸಲಾಪುರ, ಬಸವಕೇಂದ್ರದ ಗೌರವಾಧ್ಯಕ್ಷ ಹನುಮಗೌಡ ಬಳ್ಳಾರಿ, ಪ್ರಮುಖರಾದ ಬಸವರಾಜ ತುರ್ವಿಹಾಳ, ಶರಣಪ್ಪ ಇಂಗಳದಾಳ, ಪ್ರಭುರಾಜ ಹವಾಲ್ದಾರ, ನಾಗನಗೌಡ ಜಾಲಿಹಾಳ, ಯಮನೂರಪ್ಪ ಬೇವೂರು, ಚಾಂದ್‌ಪಾಷ, ಅಮರೇಶ ದೇವಲ್, ಹನುಮಂತಪ್ಪ ಹುಣಶಿಹಾಳ, ಗುಂಡಪ್ಪ ಹಡಪದ ಸೇರಿದಂತೆ ಇತರರಿದ್ದರು.