

ಮುದ್ದೇಬಿಹಾಳ: ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 1ರಲ್ಲಿ ಮತ ಚಲಾಯಿಸಲು ಭಾನುವಾರ ಬಂದಿದ್ದ ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡರು ಮತದಾರರು ಯಾರಿಗೆ ಮತ ಹಾಕಿದ್ದಾರೆ ಎನ್ನುವುದನ್ನು ಬಹಿರಂಗಪಡಿಸುವ ಅವಕಾಶವಿರುವ ವ್ಯವಸ್ಥೆಗೆ ಆಕ್ಷೇಪ ವ್ಯಕ್ತಪಡಿಸಿ ಸಲಹೆ ರೂಪದಲ್ಲಿ ಮಾರ್ಗದರ್ಶನ ಮಾಡಿದರು.
ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ನ 5 ವರ್ಷ ಅವಧಿಯ ಆಡಳಿತ ಮಂಡಳಿಯ 9 ನಿರ್ದೇಶಕರ ಸ್ಥಾನಗಳ ಚುನಾವಣೆಗೆ ಮತದಾನ ಏರ್ಪಡಿಸಲಾಗಿತ್ತು. ಆಪ್ತರೊಂದಿಗೆ ಮತ ಹಾಕಲು ಬಂದಿದ್ದ ಶಾಸಕರು ಮತದಾನ ಸಿಬ್ಬಂದಿ ಹೇಳಿದಂತೆ ನಡೆದುಕೊಂಡರು. ಮೊದಲಿಗೆ ರಜಿಸ್ಟರ್‌ನಲ್ಲಿ ತಮ್ಮ ಹೆಸರಿನ ಮುಂದೆ ಸಹಿ ಮಾಡಿ ನಂತರ ಮತಪತ್ರದ ಕೌಂಟರ್‌ಪ್ರತಿಯಲ್ಲಿ ಸಹಿ ಮಾಡುವಾಗ ಸ್ವಲ್ಪ ತಡೆದು ಮತಪತ್ರ ಮತ್ತು ಕೌಂಟರ್‌ಪ್ರತಿ ಎರಡರಲ್ಲೂ ಕ್ರಮ ಸಂಖ್ಯೆ ಬಳಸಿರುವುದನ್ನು ಗಮನಿಸಿ ಆಕ್ಷೇಪಿಸಿದರು.
ರಜಿಸ್ಟರ್‌ನಲ್ಲಿ ಮತದಾರ ಪಟ್ಟಿಯ ಕ್ರಮಸಂಖ್ಯೆ, ಹೆಸರು ಬರೆದು ಸಹಿ ಮಾಡಿಸಿಕೊಂಡಿರುತ್ತೀರಿ. ಕೌಂಟರ್‌ಫೈಲ್‌ನಲ್ಲಿಯೂ ಸಹಿ ಮಾಡಿಸಿಕೊಳ್ಳುತ್ತೀರಿ. ಕೌಂಟರ್‌ಪ್ರತಿ, ಮತಪತ್ರ ಎರಡರಲ್ಲೂ ಒಂದೇ ಕ್ರಮಸಂಖ್ಯೆ ಇದೆ. ಇದರಿಂದ ಯಾರು ಯಾರಿಗೆ ಮತ ಹಾಕಿದರು ಅನ್ನೋದನ್ನು ತಿಳಿದುಕೊಳ್ಳುವ ಸಾಧ್ಯತೆ ಇರುತ್ತದೆ. ಮತಪತ್ರದ ಮೇಲೆ ಮುದ್ರಿಸಿರುವ ಕ್ರಮಸಂಖ್ಯೆಯನ್ನು ಕಾಣದಂತೆ ರಹಸ್ಯವಾಗಿರಿಸಬೇಕಿತ್ತು ಅಥವಾ ಅದರ ಮೇಲೆ ಕಪ್ಪು ಪಟ್ಟಿ ಹಚ್ಚಿ ಗುರುತು ಮುಚ್ಚಬಹುದಿತ್ತು ಎಂದು ತಮ್ಮ ಹೆಬ್ಬೆಟ್ಟಿನಿಂದ ಮತಪತ್ರದ ಮೇಲಿರುವ ಕ್ರಮಸಂಖ್ಯೆ ಮುಚ್ಚಿ ಪ್ರಾಯೋಗಿಕವಾಗಿ ತಿಳಿಸಿಕೊಟ್ಟು ಮತದಾನ ಮುಗಿದ ಕೂಡಲೇ ರಜಿಸ್ಟರ್, ಕೌಂಟರ್‌ಫೈಲ್ ಸೀಲ್ ಮಾಡಿ ಭದ್ರವಾಗಿಡುವಂತೆ ಸಲಹೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಜಿಸ್ಟರ್‌ನಲ್ಲಿನ ಕ್ರಮಸಂಖ್ಯೆಯಲ್ಲಿರುವ ಸಹಿ, ಕೌಂಟರ್‌ಪ್ರತಿ ಸಹಿ ತಾಳೆ ಹಾಕಿದರೆ ಯಾರು ಯಾರಿಗೆ ಮತ ಹಾಕಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವ ಸಾಧ್ಯತೆಗಳಿವೆ. ಮತಪತ್ರದಲ್ಲಿರುವ ಕ್ರಮಸಂಖ್ಯೆ ಮೇಲೆ ಕಪ್ಪು ಪಟ್ಟಿ ಹಚ್ಚಿ ಮರೆಮಾಡಬಹುದಿತ್ತು. ಮೊನ್ನೆ ಬೆಂಗಳೂರಿನಲ್ಲಿ ನಡೆದ ಚುನಾವಣೆಯೊಂದರಲ್ಲೂ ಇಂಥ ತಪ್ಪು ನಡೆದಿತ್ತು. ಇದು ನನ್ನ ಅನುಭವಕ್ಕೆ ಬಂದಿರುವ ಎರಡನೇ ತಪ್ಪು, ಹಾಗಾಗಬಾರದಿತ್ತು, ಆದರೆ ಆಗಿದೆ. ಮತದಾನ ಮುಗಿದ ಕೂಡಲೇ ರಜಿಸ್ಟರ್, ಕೌಂಟರ್‌ಪ್ರತಿ ಕವರ್‌ನಲ್ಲಿ ಹಾಕಿ ಸೀಲ್ ಮಾಡಿ ಲಾಕರ್‌ನಲ್ಲಿಟ್ಟು ಅದನ್ನೂ ಸೀಲ್ ಮಾಡಿ ಭದ್ರತಪಡಿಸುವಂತೆ ಸಲಹೆ ನೀಡಿದ್ದೇನೆ. ಅಕಸ್ಮಾತ್ ಕೋರ್ಟ್‌ನಲ್ಲಿ ಈ ಕುರಿತು ಮಾಹಿತಿ ಕೇಳಿದರೆ ಮಾತ್ರ ಹಾಜರುಪಡಿಸಬಹುದಾಗಿದೆ ಎಂದರು.
ಸಹಕಾರ ಕಾಯ್ದೆ, ಸಾರ್ವತ್ರಿಕ ಚುನಾವಣೆ ಕಾಯ್ದೆ ಬೇರೆ ಬೇರೆ ಇರುವುದಿಲ್ಲವೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಹಾಗೇನು ಇಲ್ಲ, ಪೀಪಲ್ಸ್ ರಿಪ್ರೆಸೆಂಟೇಷನ್ ಆ್ಯಕ್ಟ್ ಪ್ರಕಾರ ಸಿಕ್ರೇಟ್ ಬ್ಯಾಲಟ್ ಪದ್ಧತಿ ಎಲ್ಲರಿಗೂ ಒಂದೇ ಇರುತ್ತದೆ ಎಂದರು.
ಬ್ಯಾಂಕಿನ ಚುನಾವಣೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಶಾಸಕರು, ಒಳ್ಳೆಯವರು ಆರಿಸಿ ಬರಬೇಕು. ಬ್ಯಾಂಕ್‌ಗೆ ಅಭಿವೃದ್ಧಿ ಮಾಡುವಂಥವರು, ಜನರಿಗೆ ಪ್ರಯೋಜನ ಮುಟ್ಟಿಸುವಂಥವರು, ಯಶಸ್ವಿಯಾಗಿ ಹೊಸ ವಿಚಾರ ಅಳವಡಿಸಿಕೊಂಡು ರಾಜಕೀಯ ಮಾಡದೆ ಬ್ಯಾಂಕ್‌ನ ಬೆಳವಣಿಗೆಗೆ ಶ್ರಮಿಸುವಂಥವರು ಇರಬೇಕು ಎಂದು ಆಶಿಸುವುದಾಗಿ ಹೇಳಿದರು.