ಮತದ ಹಕ್ಕನ್ನು ವಿವೇಚನೆಯಿಂದ ಬಳಸದಿದ್ದರೆ ಶೋಷಣೆ ತಪ್ಪಿದ್ದಲ್ಲ

Screenshot_2023_0809_101450.png
Published on

ಬೆಳಗಾವಿ: ದೇಶದ ಸಂವಿಧಾನಕ್ಕೆ ಈಗ ದೊಡ್ಡ ಆತಂಕ ಬಂದಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಮತದ ಹಕ್ಕನ್ನು ವಿವೇಚನೆಯಿಂದ ಬಳಸದಿದ್ದರೆ ಶೋಷಣೆ ತಪ್ಪಿದ್ದಲ್ಲ ಎಂದು ಸಾಮಾಜಿಕ ಹೋರಾಟಗಾರ್ತಿ ಅಕ್ಷತಾ ಎಚ್ಚರಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ವತಿಯಿಂದ ಛತ್ರಪತಿ ಶಾಹೂ ಮಹಾರಾಜ ಅವರ 149ನೇ ಜಯಂತಿ ಪ್ರಯುಕ್ತ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಶೋಷಿತ ಸಮುದಾಯಗಳ ಸಾಮಾಜಿಕ ನ್ಯಾಯಕ್ಕಾಗಿ ಸಂಕಲ್ಪ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಡೀ ದೇಶದಲ್ಲಿ ಕೇವಲ ಎರಡು ಸೀಟುಗಳನ್ನು ಗೆಲ್ಲುತ್ತಿದ್ದ ಬಿಜೆಪಿ ಇಂದು 300 ಕ್ಷೇತ್ರಗಳಲ್ಲಿ ಗೆಲ್ಲಲು ಹೇಗೆ ಸಾಧ್ಯವಾಗಿದೆ ಯೋಚಿಸಿ. ನಮ್ಮಲ್ಲಿನ ಒಡಕೇ ಇದಕ್ಕೆ ಕಾರಣ. ಶೋಷಿತ ಸಮುದಾಯಗಳನ್ನು ವ್ಯವಸ್ಥಿತವಾಗಿ ಒಡೆದು, ಅಧಿಕಾರದಲ್ಲಿ ಕುಳಿತಿದ್ದಾರೆ. ಬಹುಸಂಖ್ಯಾತರಾದ ಈ ದೇಶದ ಮೂಲ ನಿವಾಸಿಗಳು ಒಂದಾಗದೇ ಹೋದರೆ ಉಳಿಗಾಲವಿಲ್ಲ ಎಂದರು.

ಸಾನ್ನಿಧ್ಯ ವಹಿಸಿದ್ದ ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಒಳಗೆ ಭೀಮವಾದ, ಹೊರಗೆ ಮನುವಾದ ಎಂಬ ಗೊಂದಲ ನಮ್ಮಲ್ಲಿ ಈಗಲೂ ಇದೆ. ಮನುವಾದವನ್ನು ಸೋಲಿಸಿ, ಭೀಮವಾದವನ್ನು ಗೆಲ್ಲಿಸಬೇಕಿದೆ. ಮುಂಬರುವ ಚುನಾವಣೆಯಲ್ಲಿ ನೀವು ಮಾಡುವ ಸಂಕಲ್ಪವೇ ಫಲಿತಾಂಶ ಆಗಲಿದೆ ಎಂದರು.

ಸಂಘಟನೆಯ ಸಂಚಾಲಕ ಪರಶುರಾಮ ನೀಲನಾಯಕ್‌ ಅಧ್ಯಕ್ಷತೆ ವಹಿಸಿದ್ದರು. ಯುವ ಮುಖಂಡ ರಾಹುಲ ಜಾರಕಿಹೊಳಿ ಮಾತನಾಡಿದರು. ಸಂಘಟನೆ ಯ ರಾಜ್ಯ ಸಮಿತಿ ಸದಸ್ಯೆ ಸುಧಾರಾಣಿ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿದರು. ಸಿದ್ಧಾರ್ಥ ಸಿಂಘೆ ಪ್ರಾಸ್ತಾವಿಕ ಭಾಷಣ ಮಾಡಿದರು. ಬಸವಾನಂದ ಶ್ರೀ, ಕಲ್ಲಪ್ಪ ರಾಮಚನ್ನಾವರ್, ಸಿದ್ರಾಯಿ ಮೇತ್ರಿ, ರವಿ ಬಸ್ತವಾಡರ ಸೇರಿದಂತೆ ರಾಜ್ಯ ಸಮಿತಿ ಹಾಗೂ ಜಿಲ್ಲಾ ಘಟಕದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net