

ಗೊಳಸಂಗಿ: ಪ್ರಜ್ಞಾವಂತರ ಮತದಾನದ ಪ್ರಮಾಣ ಕಡಿಮೆಯಾದರೆ ದೇಶಕ್ಕೆ ಗಂಡಾಂತರ ತಪ್ಪಿದ್ದಲ್ಲ. ಪ್ರಜಾಪ್ರಭುತ್ವದ ತಾಯಿಬೇರಿನಂತಿರುವ ಮತದಾನ ಪ್ರಕ್ರಿಯೆಯಿಂದ ಪ್ರಜ್ಞಾವಂತರು ದೂರವೇ ಉಳಿದರೆ ಭವಿಷ್ಯದಲ್ಲಿ ಚಿಗುರುವ ಮರದ ಸೊಬಗು ಕಾಣಲು ಹೇಗೆ ಸಾಧ್ಯ ಎಂದು ಬಸವನಬಾಗೇವಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಚೇರಿ ಯೋಜನಾಧಿಕಾರಿ, ಸೆಕ್ಟರ್ ಅಧಿಕಾರಿ ನಿರ್ಮಲಾ ಸುರಪುರ ಹೇಳಿದರು.
ಸಮೀಪದ ಕೂಡಗಿ ತಾಂಡಾದ ಶಂಕರ ನಗರದಲ್ಲಿ ಶನಿವಾರ ನಡೆದ ವಾರದ ಸಂತೆಯಲ್ಲಿ ಲೋಕಸಭಾ ಚುನಾವಣಾ ನಿಮಿತ್ತವಾಗಿ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರಜಾಪ್ರಭುತ್ವದ ಮತದಾನವೆಂಬ ಈ ಹಬ್ಬ ಮಾಡಲು ಸರ್ಕಾರ ಸುಮಾರು 6 ತಿಂಗಳು ಮೊದಲೇ ತಯಾರಿ, ತಾಲೀಮು ನಡೆಸಿರುತ್ತದೆ.
ನೀವು ಮತದಾನ ದಿನದಂದು ಬಾರದೆ ಹೋದರೆ ಸರ್ಕಾರದ ಪ್ರಯತ್ನ ಲಪ್ರದವಾಗುವುದಿಲ್ಲ ಎಂದರು.
ಪಿಡಿಒ ಎ.ಎಸ್. ಕೋಟ್ಯಾಳ, ಅಂಗನವಾಡಿ ಮೇಲ್ವಿಚಾರಕಿ, ಬಿಎಲ್ಒ, ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ, ಗ್ರಾಮ ಸಹಾಯಕರು ಇತರರಿದ್ದರು.