

ವಿಜಯಪುರ: ಪ್ರಜಾಪ್ರಭುತ್ವ ಬಲಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕನೂ ಜವಾಬ್ದಾರಿಯುತವಾಗಿ ಮತದಾನ ಮಾಡುವುದು ಅತ್ಯಗತ್ಯ ಎಂದು ಇಎಲ್‌ಸಿ ನೋಡಲ್ ಅಧಿಕಾರಿ ಚಿದಾನಂದ ಆನೂರ ಹೇಳಿದರು.
ನಗರ ಹೊರವಲಯದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್ ಕೋಶ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಮಹಿಳಾ ವಿವಿ ಸ್ವೀಪ್ ಸಮಿತಿ ಸಹಯೋಗದೊಂದಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಸ್ವಚ್ಛತಾ ಮತ್ತು ಮತದಾನದ ಅರಿವು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವಜನತೆ ದೇಶದ ಭವಿಷ್ಯ ನಿರ್ಧರಿಸುವ ಮಹತ್ವದ ಶಕ್ತಿಯಾಗಿ ಹೊರಹೊಮ್ಮುತ್ತಿದ್ದಾರೆ. ಹೀಗಾಗಿ, ಅವರಿಗೆ ಪ್ರಜಾಪ್ರಭುತ್ವದ ಮಹತ್ವ ಅರ್ಥಮಾಡಿಸುವುದು ಅವಶ್ಯಕ. ಶಾಲಾ-ಕಾಲೇಜುಗಳಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮ, ಬೀದಿ ನಾಟಕ, ಸಾರ್ವಜನಿಕ ಭಾಷಣ ಮತ್ತು ಸಾಮಾಜಿಕ ಮಾಧ್ಯಮ ಬಳಕೆ ಮೂಲಕ ಮತದಾನದ ಮಹತ್ವ ಬೋಧಿಸಬೇಕು ಎಂದರು.
ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಎಚ್.ಎಂ. ಚಂದ್ರಶೇಖರ ಮಾತನಾಡಿ, ಯುವಜನತೆ ದಾರಿ ತಪ್ಪುವ ಪ್ರಮುಖ ಕಾರಣಗಳು ತಾಂತ್ರಿಕ ಪ್ರಭಾವ, ನಿರುದ್ಯೋಗ ಮತ್ತು ಜಾಗೃತಿಯ ಕೊರತೆ. ಇವುಗಳನ್ನು ತಡೆಯಲು ಶಾಲಾ-ಕಾಲೇಜುಗಳಲ್ಲಿ ಮತದಾನದ ಮಹತ್ವ ಮತ್ತು ನೈತಿಕ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಪ್ರೊ. ಅಶೋಕಕುಮಾರ ಸುರಪುರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಶೋಧನಾ ವಿದ್ಯಾರ್ಥಿನಿ ಫೆಲೋಮಿನಾ ನಿರೂಪಿಸಿದರು. ಮಹಿಳಾ ವಿವಿ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಡಾ. ತಹಮೀನಾ ನಿಗಾರ ಸುಲ್ತಾನಾ ವಂದಿಸಿದರು.