

ಹುಣಸೂರು: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್)ದ ಆಡಳಿತ ಮಂಡಳಿ ಚುನಾವಣೆ ಭಾನುವಾರ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.
ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಆವರಣದಲ್ಲಿ ಆಡಳಿತ ಮಂಡಳಿಯ ಬಿ ತರಗತಿಯ 8 ಮಂದಿ ಸದಸ್ಯರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತ ಒಟ್ಟು 23 ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದಿತ್ತು. ಶಾಸಕ ಜಿ.ಡಿ.ಹರೀಶ್‌ಗೌಡ ತಮ್ಮ ಪಕ್ಷದ ಬೆಂಬಲಿಗರೊಂದಿಗೆ ಮತ ಚಲಾಯಿಸಿದರು. ಕಾಂಗ್ರೆಸ್ ಕೂಡ 8 ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸಿದೆ.
ಸಂಘದ ಎ ತರಗತಿ(ಸೊಸೈಟಿಗಳನ್ನು ಪ್ರತಿನಿಧಿಸುವ ಸದಸ್ಯರು)ಯ 4 ಸ್ಥಾನಗಳನ್ನು ಅವಿರೋಧವಾಗಿ ಜೆಡಿಎಸ್ ತನ್ನ ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ಸಹಕಾರ ಕ್ಷೇತ್ರದಲ್ಲಿ ತಾನು ಪ್ರಾಬಲ್ಯ ಹೊಂದಿದ್ದೇನೆಂದು ಸಾಬೀತುಪಡಿಸಿದೆ. ಇದೀಗ ಬಿ ತರಗತಿಯಲ್ಲೂ ತನ್ನ ಪ್ರಾಬಲ್ಯ ಮೆರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಆಡಳಿತ ಮಂಡಳಿಯ 8 ಸ್ಥಾನಗಳಿಗೆ ಒಟ್ಟು 1633 ಮತದಾರರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲಿದ್ದಾರೆ.
ಇದೇ ಮೊದಲ ಬಾರಿಗೆ ಟಿಎಪಿಸಿಎಂಎಸ್ ಚುನಾವಣೆ ಅತ್ಯಂತ ಬಿರುಸಿನಿಂದ ಕೂಡಿತ್ತು. ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ತಮ್ಮ ತಮ್ಮ ಅಭ್ಯರ್ಥಿಗಳ ಪರ ಮತಯಾಚಿಸಿದರು. ಅಲ್ಲಲ್ಲಿ ಗುಂಪುಗುಂಪಾಗಿ ನಿಂತು ಮತದಾರರನ್ನು ಸೆಳೆಯುವ ಕಸರತ್ತು ನಡೆಸಿದ್ದರು.