ಮತದಾನ ಕೇವಲ ಹಕ್ಕಲ್ಲ ಪ್ರತಿಯೊಬ್ಬರ ಕರ್ತವ್ಯ

25bdvt.1...
ಭದ್ರಾವತಿಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಗೆ ಟಿ.ಶ್ರೀಕಾಂತ್ ಚಾಲನೆ ನೀಡಿದರು. ಕೆ.ಆರ್.ನಾಗರಾಜ್, ಸಿ.ಎನ್.ಲೋಕೇಶ್, ಪ್ರಕಾಶ್ ಎಂ ಚನ್ನಪ್ಪನವರ್, ಎ.ಕೆ.ನಾಗೇಂದ್ರಪ್ಪ ಇತರರಿದ್ದರು.
Published on

ಭದ್ರಾವತಿ: ಮತದಾನ ಎನ್ನುವುದು ಸಂವಿಧಾನ ನಮಗೆ ಕೊಟ್ಟಿರುವ ಹಕ್ಕು ಮಾತ್ರವಲ್ಲ ನಮ್ಮೆಲ್ಲರ ಕರ್ತವ್ಯವೂ ಆಗಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಶ್ರೀಕಾಂತ್ ಹೇಳಿದರು.

ತಾಲೂಕು ಆಡಳಿತ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ನಾವು ಹಾಕುವ ಒಂದು ಮತದಿಂದ ಗೆಲ್ಲುವ ಚುನಾಯಿತ ಪ್ರತಿನಿಧಿಗಳು, ಮಾಡುವ ಕಾನೂನುಗಳಿಂದ ಸಮಾಜದ ಮೇಲೆ ಹಾಗೂ ನಮ್ಮ ಮೇಲೆ ಸಾಕಷ್ಟು ಉತ್ತಮ ಪರಿಣಾಮ ಬೀರುತ್ತವೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತದಾನದ ಹಕ್ಕು ಸರ್ಕಾರ ನೀಡಿದ್ದು ಮತ ಹಾಕುವ ಮತದಾರ ಯೋಚಿಸಿ ಎಚ್ಚರಿಕೆಯಿಂದ ಮತದಾನ ಮಾಡಬೇಕು ಎಂದರು.
ಹಿಂದೆ ವಕೀಲರೇ ಹೆಚ್ಚಾಗಿ ರಾಜಕೀಯ ರಂಗ ಪ್ರವೇಶಿಸುತ್ತಿದ್ದರು. ಕಾನೂನುಗಳ ಅರಿವು ತಿಳಿವಳಿಕೆ ಕೂಡ ಹೊಂದಿರುತ್ತಿದ್ದರು. ಇತ್ತೀಚೆಗೆ ವಕೀಲರ ರಾಜಕೀಯ ಪ್ರವೇಶ ಕಡಿಮೆಯಾಗಿದೆ. ಇಂದಿಗೂ ಬ್ರಿಟಿಷರು ಮಾಡಿದ ಕಾನೂನುಗಳನ್ನೇ ನಾವು ಒಪ್ಪಿಕೊಂಡು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಅವುಗಳನ್ನು ತಿದ್ದುಪಡಿ ಮಾಡುವುದೂ ಕಷ್ಟ. ತಿದ್ದುಪಡಿ ಮಾಡುವ ಅವಕಾಶ ಜನಪ್ರತಿನಿಧಿಗಳಿಗಿದ್ದು ತಿಳಿವಳಿಕೆಯುಳ್ಳ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವುದು ಯುವ ಪೀಳಿಗೆಯ ಜವಾಬ್ದಾರಿ ಎಂದು ತಿಳಿಸಿದರು.
ತಹಸೀಲ್ದಾರ್ ಕೆ.ಆರ್.ನಾಗರಾಜ್ ಮಾತನಾಡಿ, ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,12,770 ಮತದಾರರಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದೃಢ ಪ್ರಜಾಪ್ರಭುತ್ವ ಕಟ್ಟಲು ಮತದಾರರ ಪಾತ್ರ ಮಹತ್ವದ್ದಾಗಿದೆ. ಮತದಾನ ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.
ನ್ಯಾಯಾಧೀಶ ಸಿ.ಎನ್.ಲೋಕೇಶ್ ಪ್ರತಿಜ್ಞಾ ವಿಧಿ ಭೋಧಿಸಿದರು. ಸಹಾಯಕ ಸರ್ಕಾರಿ ಅಭಿಯೋಜಕ ನಾಗರಾಜ್, ಪಿ.ರತ್ನಮ್ಮ, ವಕೀಲರ ಸಂಘದ ಅಧ್ಯಕ್ಷ ಉಮೇಶ್, ಪೌರಾಯುಕ್ತ ಪ್ರಕಾಶ್ ಎಂ.ಚನ್ನಪ್ಪನವರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ, ಗ್ರೇಡ್- 2 ತಹಸೀಲ್ದಾರ್ ರಂಗಮ್ಮ ಮಂಜಾನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net