ಮತ ಚಲಾವಣೆ ಪ್ರತಿಯೊಬ್ಬರ ಹಕ್ಕು : ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ ಹೇಳಿಕೆ

IMG-20230314-WA0005.jpg
Published on

ಬೆಳಗಾವಿ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಚಲಾವಣೆ ಪ್ರತಿಯೊಬ್ಬರ ಹಕ್ಕು. ಯಾರೊಬ್ಬರೂ ಮತದಾನದಿಂದ ವಂಚಿತರಾಗದೇ ಎಲ್ಲರೂ ತಪ್ಪದೇ ಮತ ಚಲಾಯಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ದೇಶ ಜಗತ್ತಿನ ಯುವ ರಾಷ್ಟ್ರವಾಗಿದ್ದು, ಮತದಾನದ ಹಕ್ಕು ಪಡೆದ ಎಲ್ಲ ಯುವಕ-ಯುವತಿಯರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಆಶೋತ್ತರಗಳಿಗೆ ತಕ್ಕಂತೆ ಹಕ್ಕು ಮತ್ತು ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.
ಮಹಾನಗರ ಪಾಲಿಕೆ ಉಪ ಆಯುಕ್ತರಾದ ಭಾಗ್ಯಶ್ರೀ ಹುಗ್ಗಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಪ್ರತಿ ರಂಗದಲ್ಲಿಯೂ ಮುಂಚುನೆಯಲ್ಲಿದ್ದಾರೆ. ಆರೋಗ್ಯದ ಜೊತೆಗೆ ದೈಹಿಕ, ಮಾನಸಿಕವಾಗಿ ಸದೃಢವಾಗಬೇಕು ಎಂದರು.
ಮಹಾನಗರ ಪಾಲಿಕೆಯವತಿಯಿಂದ ಮತದಾನ ಕುರಿತು ಮಾದರಿ ಇವಿಎಂ, ವಿವಿಪ್ಯಾಟ ಮಷಿನ್‌ಗಳ ಮೂಲಕ ಮತದಾನ ಪ್ರಾತ್ಯಕ್ಷಿಕೆ ನೀಡಿ, ಜಾಗೃತಿ ಮೂಡಿಸಲಾಯಿತು. ಶಿಕ್ಷಣ ಇಲಾಖೆಯ ವತಿಯಿಂದ ವಿವಿಧ ಚಿತ್ರಕಲೆ ಹಾಗೂ ಜಿಪಂ ವತಿಯಿಂದ ಸೆಲ್ಪಿ ಸ್ಟಾೃಂಡ್ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
ಯುವ ಜನ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಜಿನೇಶ್ವರ ಪಡನಾಡ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಿ.ಎಸ್.ಡಿಗ್ರಜ, ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಮುಕುಂದ ಕಿಲ್ಲೇಕರ, ಜಿಪಂ ಡಿಐಇಸಿ ಪ್ರಮೋದ ಗೋಡೆಕರ್, ಬಾಹುಬಲಿ ಮೆಳವಂಕಿ, ಟಿಐಇಸಿ ರಮೇಶ ಮಾದರ, ಕ್ರೀಡಾ ತರಬೇತಿದಾರ ವಿ.ಎಸ್.ಪಾಟೀಲ, ಸಂಜು ನಾಯಕ ಸೇರಿದಂತೆ ಇತರರು ಇದ್ದರು. ಶೈಲಜಾ ಕೋಕರೆ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net