ಮತದಾನ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ

26 vikram 11
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಅರಿವಿನಿಂದ ಕೂಡಿದ ಬದುಕು ನಮ್ಮದಾಗಬೇಕು. ನಡೆ ನುಡಿಗಳು ಒಂದಾಗಿರಬೇಕು. ಶಿಸ್ತುಬದ್ಧ ಜೀವನದೊಂದಿಗೆ ಮುನ್ನಡೆದರೆ ಉಜ್ವಲ ಭವಿಷ್ಯ ನಮ್ಮದಾಗಲಿದೆ ಎಂದು ಸಂಪನ್ಮೂಲ ವ್ಯಕ್ತಿ ನಟರಾಜ ಮೂರಶಿಳ್ಳಿ ಹೇಳಿದರು.
ನಗರದ ಜೆಎಸ್‌ಎಸ್‌ನ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಮಾನವ ಹಕ್ಕುಗಳ ಸಂಘ ಮತ್ತು ಎನ್‌ಎಸ್‌ಎಸ್ ಘಟಕ ವತಿಯಿಂದ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಿರಂತರ ಓದುವಿಕೆ ಮೈಗೂಡಿಸಿಕೊಂಡರೆ ಶಬ್ಧ ಭಂಡಾರ ಹೆಚ್ಚುತ್ತದೆ. ಅದರಿಂದ ಮಾತಿನ ಕೌಶಲ ಬೆಳೆಯುವುದಲ್ಲದೆ, ನಾವಾಡುವ ಮಾತು ನಮ್ಮ ವ್ಯಕ್ತಿತ್ವ ಸೂಚಿಸುತ್ತದೆ. ಮತದಾರರ ಕರ್ತವ್ಯ, ಮತದಾನದ ಜಾಗೃತಿ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಮಾತನಾಡಿ, ಮತದಾನ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ. ಜನರು ಧ್ವನಿ ಎತ್ತುವುದು ಅವಶ್ಯಕ. ಪ್ರತಿಯೊಬ್ಬರಿಗೂ ಮತದಾನದ ಹಕ್ಕಿದೆ. ಮತದಾನ ಮಾಡುವುದು ಕೇವಲ ಕರ್ತವ್ಯ ಅಷ್ಟೆ ಅಲ್ಲದೆ, ಇದು ನಮ್ಮ ಸರ್ಕಾರ ರಚಿಸುವ ಸರಿಯಾದ ಮಾರ್ಗವಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಮತದಾನ ಮಾಡಿ ಪ್ರಜಾಪ್ರಭುತ್ವ ಕಾಪಾಡುತ್ತೇವೆ ಎಂದು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಪಾಲಿಕೆ ಮಾಜಿ ಸದಸ್ಯ ಸಂಜಯ ಕಪಟಕರ, ಡಾ. ಸೂರಜ್ ಜೈನ, ಮಹಾವೀರ ಉಪಾಧ್ಯೆ, ಡಾ. ಆರ್.ವಿ.ಚಿಟಗುಪ್ಪಿ, ಇತರರು ಇದ್ದರು.
ಡಾ. ಶಿವಾನಂದ ಟವಳಿ ಸ್ವಾಗತಿಸಿದರು. ಪ್ರೊ. ಮಹಾಂತ ದೇಸಾಯಿ ನಿರೂಪಿಸಿದರು. ಡಾ. ರೋನಿಲ್ ಮನೋಹರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net