

ಬೆಂ. ಗ್ರಾಮಾಂತರ: ದೇವನಹಳ್ಳಿ, ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯ ಪಂಚಾಯಿತಿಗಳಿಗೆ ಭಾನುವಾರ ಚುನಾವಣೆ ಮುಗಿದಿದ್ದು, ಶೇ.91.35 ಮತ ಚಲಾವಣೆಯಾಗಿದೆ.
ದೊಡ್ಡಬಳ್ಳಾಪುರದಲ್ಲಿ ಶೇ. 91.50 ಹಾಗೂ ದೇವನಹಳ್ಳಿಯಲ್ಲಿ ಶೇ.92.22 ಮತಚಲಾವಣೆಯಾಗಿದೆ. ಕೆಲ ಮತಗಟ್ಟೆಗಳ ಬಳಿ ಮಾತಿನ ಚಕಮಕಿ ನಡೆದಿದೆ, ತೂಬಗೆರೆ ಹೋಬಳಿ ಹಾಡೋನಹಳ್ಳಿಯಲ್ಲಿ ಎರಡು ಬಣಗಳ ನಡುವೆ ಘರ್ಷಣೆ ನಡೆದಿದ್ದು ಹೊರತುಪಡಿಸಿ ಎರಡೂ ತಾಲೂಕು ವ್ಯಾಪ್ತಿಯಲ್ಲಿ ಶಾಂತಿಯುತ ಮತದಾನ ನಡೆದಿದೆ.
ದೊಡ್ಡಬಳ್ಳಾಪುರ 25 ಪಂಚಾಯಿತಿ: 25 ಗ್ರಾಪಂನ 443 ಕ್ಷೇತ್ರಗಳ 239 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಕೊಡಿಗೇಹಳ್ಳಿ, ಪಾಲನಜೋಗಿಹಳ್ಳಿ, ಹಾಡೋನಹಳ್ಳಿ, ನೇರಳಘಟ್ಟ ಮತಗಟ್ಟೆಯಲ್ಲಿ ಅಭ್ಯರ್ಥಿಗಳ ಹಿಂಬಾಲಕರ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರ ಮಧ್ಯೆ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು. ದೇವನಹಳ್ಳಿ ತಾಲೂಕಿನ 20 ಗ್ರಾಪಂಗಳ 305 ಸ್ಥಾನಗಳಿಗೆ 771 ಅಭ್ಯರ್ಥಿಗಳು ಹಾಗೂ ದೊಡ್ಡಬಳ್ಳಾಪುರದ 1131 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಗಳಲ್ಲಿ ಭದ್ರವಾಗಿದೆ.
ಜನಜಾತ್ರೆ: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಹೆಚ್ಚು ಸದಸ್ಯರಿರುವ ಕೊಡಿಗೇಹಳ್ಳಿಯ ಪಂಚಾಯಿತಿಯ ಪಾಲನ ಜೋಗಿಹಳ್ಳಿಯ ಮುಖ್ಯ ರಸ್ತೆಯಲ್ಲಿ 1 ಕಿಲೋಮೀಟರ್‌ನಷ್ಟು ಜನ ಜಾತ್ರೆಗೆ ಸೇರಿದ್ದವರಂತೆ ಕಂಡುಬಂದರು.
ಹಣ ಹಂಚಿಕೆ: ಮತ ಹಾಕಲು ಬರುವ ಜನರನ್ನು ಬದಿಗೆ ಕರೆದು ತೆರೆಮರೆಯಲ್ಲಿ ಹಣ ಹಂಚಲು ಮುಂದಾದ ಪ್ರಸಂಗಗಳು ಕಂಡುಬಂದವು. ಗುಂಪುಗೂಡುತ್ತಿದ್ದ ಜನರನ್ನು ಚದುರಿಸುವಲ್ಲಿ ಪೊಲೀಸರು ಹೈರಾಣಾದರು. ದೊಡ್ಡಬೆಳವಂಗಲ, ಮಧುರೆ, ಕನಸವಾಡಿ, ಸಾಸಲು ಹೋಬಳಿ ವ್ಯಾಪ್ತಿಯಲ್ಲಿ ಶಾಂತಿಯುತ ಮತದಾನ ನಡೆದಿದೆ. ಸಾಸಲು ಹೋಬಳಿಯ ಕೆಲವು ಹಳ್ಳಿಗಳಲ್ಲಿ ಮಧ್ಯಾಹ್ನದ ವೇಳೆಗಾಗಲೇ ಮತದಾನ ಪೂರ್ಣಗೊಂಡಿತ್ತು. ತೂಬಗೆರೆ, ರಾಜಘಟ್ಟ, ಹುಲಿಕುಂಟೆ ವ್ಯಾಪ್ತಿಯಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ.
ದೊಡ್ಡಬಳ್ಳಾಪುರ ತಾಲೂಕಿನ 25 ಗ್ರಾಪಂ ವ್ಯಾಪ್ತಿಯಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಅಹಿತಕರ ಘಟನೆ ನಡೆದಿಲ್ಲ. ಮತದಾನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಟಿ.ಎಸ್ ಶಿವರಾಜ್, ತಹಸೀಲ್ದಾರ್
ಹಾಡೋನಹಳ್ಳಿಯಲ್ಲಿ ಘರ್ಷಣೆ: ತೂಬಗೆರೆ ಹೋಬಳಿಯ ಹಾಡೋನಹಳ್ಳಿಯಲ್ಲಿ ಎರಡು ಬಣಗಳ ನಡುವೆ ಘರ್ಷಣೆ ನಡೆದಿದೆ. ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆ ಮತಗಟ್ಟೆ ಬಳಿ ಜಿಪಂ ಸದಸ್ಯ ಅಪ್ಪಯ್ಯಣ್ಣ ಅವರು ಶೆಟ್ಟಪ್ಪ ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಾಡೋನಹಳ್ಳಿ ಗ್ರಾಪಂ ಸಿಬ್ಬಂದಿ ಹರೀಶ್ ಎಂಬುವವರು ಬೂತ್ ಒಳಗೆ ಕರೆದುಕೊಂಡು ಹೋಗಿ ಮತ ಹಾಕಿಸುತ್ತಿದ್ದರು, ಈತ ಅಪ್ಪಯ್ಯಣ್ಣನ ಬೆಂಬಲಿಗನಾಗಿದ್ದು, ಮತಗಟ್ಟೆ ಕೇಂದ್ರದಲ್ಲಿ ಇಂಥವರಿಗೆ ಮತಹಾಕುವಂತೆ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ, ಇದಕ್ಕೆ ಮತ್ತೊಂದು ಬಣದವರು ಆಕ್ಷೇಪಿಸಿದಾಗ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದು ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಅಪ್ಪಯ್ಯಣ್ಣ ಬೆಂಬಲಿಗರು ಭಯದ ವಾತಾವರಣ ನಿರ್ಮಾಣ ಮಾಡಿ ಮತದಾರರಿಗೆ ಧಮ್ಕಿ ಹಾಕಿದ್ದಾರೆ ಎಂದು ವಿರೋಧಿ ಬಣದ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.
ಚಿಹ್ನೆ ಚಿಕ್ಕದು ಎಂದು ತಕರಾರು: ವಿಜಯಪುರ ಹೋಬಳಿ ಗೊಡ್ಲುಮುದ್ದೇನಹಳ್ಳಿಯಲ್ಲಿ ಕೆಲ ಮುಂಖಡರು ಗುರುತಿನ ಚಿಹ್ನೆ ವಿಚಾರಕ್ಕೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಜೆಡಿಎಸ್ ಮುಖಂಡರ ಚಿಹ್ನೆಗಳು ಮತಪತ್ರದಲ್ಲಿ ಚಿಕ್ಕದಾಗಿದೆ ಎಂದು ತಕರಾರು ತೆಗೆದ ಕಾರಣ ಅರ್ಧ ಗಂಟೆ ಮತದಾನ ಪ್ರಕ್ರಿಯೆ ತಡವಾಯಿತು.
ನಿಂಬೆ ಹಣ್ಣು ಮಂತ್ರ: ವಿಜಯಪುರ ಹೋಬಳಿಯ ಕೆಲವು ಮತಗಟ್ಟೆಗಳ ಬಳಿ ನಿಂಬೆಹಣ್ಣುಗಳು ಕಂಡುಬಂದಿದ್ದು, ಮತದಾರರಲ್ಲಿ ಆತಂಕದ ವಾತಾವರಣಕ್ಕೆ ಕಾರಣವಾಯಿತು, ಅರಿಶಿಣ ಕುಂಕುಮ ಬೆರೆಸಿದ್ದ ಅಕ್ಕಿಕಾಳನ್ನು ರಸ್ತೆಯಲ್ಲಿ ಚೆಲ್ಲಿದ್ದು ಕಂಡುಬಂದವು.
ಕಾರಿನ ಗಾಜು ಪುಡಿ: ಸಾವಕನಹಳ್ಳಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಸ್.ಪಿ.ಮುನಿರಾಜು ಅವರ ಕಾರಿನ ಗಾಜನ್ನು ಕಿಡಿಗೇಡಿಗಳು ಪುಡಿಮಾಡಿದ್ದು ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಿಡಿಗೇಡಿಗಳು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳುವ ಮೂಲಕ ಅಭ್ಯರ್ಥಿ ಮುನಿರಾಜು ದೂರು ದಾಖಲಿಸದೆ ಪ್ರಕರಣಕ್ಕೆ ಅಂತ್ಯಹಾಡಿದರು.
ಆನೇಕಲ್ ವ್ಯಾಪ್ತಿಯಲ್ಲಿ ಶೇ.72ಮತದಾನ
ಆನೇಕಲ್: ತಾಲೂಕಿನ 28 ಗ್ರಾಪಂ ಚುನಾವಣೆಯಲ್ಲಿ ಶೇ. 72 ಮತದಾನವಾಗಿದೆ. ತಿಗಳ ಚೌಡದೇನಹಳ್ಳಿ ವಾರ್ಡ್ 1 ರಲ್ಲಿ ಸುಮಾರು 189 ಮತದಾರರನ್ನು ಕೈಬಿಟ್ಟಿದ್ದಾರೆಂದು ಪಕ್ಷೇತರ ಅಭ್ಯರ್ಥಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪರಿಸ್ಥಿತಿ ತಿಳಿಗೊಳಿಸಿದರು. ದೊಮ್ಮಸಂದ್ರದ 13ನೇ ವಾರ್ಡ್‌ನಲ್ಲಿ ಮಂಗಳಮುಖಿ ಆರತಿ ಜವರಗೌಡ ಸೇರಿ ಮಂಗಳಮುಖಿಯರ ತಂಡ ಮತಗಟ್ಟೆ ಬಳಿ ಮತಯಾಚಿಸಿದರು. ಬಂಡಾಪುರ ಗ್ರಾಪಂ ಅಭ್ಯರ್ಥಿ ಮಮತಾ ವೆಂಕಟಸ್ವಾಮಿ ಮತದಾರರಿಗೆ ವೀಳ್ಯದೆಲೆ, ಅಡಕೆ ನೀಡುವ ಮೂಲಕ ಮತಯಾಚನೆ ನಡೆಸಿದ್ದು ಕಂಡುಬಂತು. ಸುರಗಜಕ್ಕನಹಳ್ಳಿ ಸರ್ಕಾರಿ ಶಾಲೆಯಲ್ಲಿ 95ರ ಅಜ್ಜಿ ಮುನಿಯಮ್ಮ ಅವರನ್ನು ಮಗ ಹೊತ್ತುಕೊಂಡು ಬಂದು ಮತದಾನ ಮಾಡಿಸಿದ್ದು ವಿಶೇಷವಾಗಿತ್ತು.
ರಾತ್ರಿ 8 ಗಂಟೆವರೆಗೆ ಮತದಾನ: ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನಕ್ಕೆ ಅವಕಾಶ ಇತ್ತು. ಸರ್ಜಾಪುರ ಸೇರಿ ನಾಲ್ಕು ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಆಗಮಿಸಿದ್ದರಿಂದ ಮತಗಟ್ಟೆಯೊಳಗೆ ಸರತಿ ಸಾಲಿನಲ್ಲಿ ನಿಂತವರಿಗೆ ರಾತ್ರಿ 8 ಗಂಟೆಯವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಿಕೊಡಲಾಯಿತು. ಸರ್ಜಾಪುರದಲ್ಲೇ ಸಂಜೆ ಬಳಿಕೆ 300ಕ್ಕೂ ಅಧಿಕ ಮಂದಿ ಮತದಾನ ಮಾಡಿದರು.
ಮುತ್ತನಲ್ಲೂರು ಗ್ರಾಪಂನ ಚಿಕ್ಕತಿಮ್ಮಸಂದ್ರದಲ್ಲಿ 210 ಮತದಾರರನ್ನು ಹೊಂದಿದ್ದು, ಈ ಪೈಕಿ 30 ಹೆಸರುಗಳನ್ನು ಬಿ.ಹೊಸಹಳ್ಳಿಗೆ ವರ್ಗಾಯಿಸಲಾಗಿದೆ. ಹೀಗಾಗಿ ಮತಚಲಾವಣೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ಅಧಿಕಾರಿಗಳು ಮತದಾರರನ್ನು ಮನವೊಲಿಸಿದರು.