

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಏ.೨೬ರಂದು ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಜೂ.೪ರಂದು ಮತ ಎಣಿಕೆ ನಡೆಯಲಿದೆ. ಮಾದರಿ ನೀತಿ ಸಂಹಿತೆ ಶನಿವಾರದಿಂದಲೇ ಜಾರಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಚುನಾವಣೆಗೆ ಮಾ.೨೮ರಂದು ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ ೪ರವರೆಗೂ ನಾಮಪತ್ರ ಸಲ್ಲಿಸಲು ಅವಕಾಶ ಇರುತ್ತದೆ. ೫ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದ್ದು, ಏ.೮ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ವ್ಯಾಪ್ತಿಯಲ್ಲಿ ೨ ವಿಧಾನಸಭಾ ಕ್ಷೇತ್ರಗಳು ಸೇರಲಿದ್ದು, ಮಡಿಕೇರಿ ಕ್ಷೇತ್ರದಲ್ಲಿ ೨,೩೬,೫೬೨ ಹಾಗೂ ವಿರಾಜಪೇಟೆ ಕ್ಷೇತ್ರದಲ್ಲಿ ೨,೨೯,೫೯೨ ಮತದಾರರು ಇದ್ದಾರೆ. ಜಿಲ್ಲೆಯಲ್ಲಿ ಒಟ್ಟು ಪುರುಷ ಮತದಾರರ ಸಂಖ್ಯೆ ೨,೨೮,೪೭೮, ಮಹಿಳಾ ಮತದಾರರ ಸಂಖ್ಯೆ ೨,೩೭,೬೬೦ ಹಾಗೂ ತೃತೀಯ ಲಿಂಗಿ ಮತದಾರರ ಸಂಖ್ಯೆ ೧೬ ಆಗಿದ್ದು, ಒಟ್ಟು ೪,೬೬,೧೫೪ ಮತದಾರರು ಇದ್ದಾರೆ. ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳುವ ಅರ್ಹರು ಈಗಲೂ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು ಎಂದರು.
ಜಿಲ್ಲೆಯಲ್ಲಿ ಒಟ್ಟು ೧,೩೫೭ ಸೇವಾ ಮತದಾರರು, ೪,೪೧೧ ಅಂಗವಿಕಲ ಮತದಾರರು ಹಾಗೂ ೮೫ ವರ್ಷ ದಾಟಿದ ೫,೬೮೬ ಮತದಾರರು ಇದ್ದಾರೆ. ೮೫ ವರ್ಷ ದಾಟಿದವರು ಬಯಸಿದರೆ ಮನೆಯಲ್ಲೆ ಮತದಾನ ಮಾಡುವ ಅವಕಾಶವೂ ಇದೆ ಎಂದು ಹೇಳಿದರು.
ಮಧ್ಯ ಸರಬರಾಜು ಮಾಡಲು ಉದ್ದೇಶಿಸಿದರೆ ಕಡ್ಡಾಯವಾಗಿ ಅಬಕಾರಿ ಇಲಾಖೆಯಿಂದ ಅನುಮತಿ ಪಡೆದು ತಾಲೂಕು ದಂಡಾಧಿಕಾರಿಗಳಿಗೆ ಮಾಹಿತಿಯನ್ನು ನೀಡಬೇಕು. ಮಧ್ಯಪಾನ ಸೇರಿಸದಿದ್ದರೆ ಯಾವುದೇ ಅನುಮತಿಯ ಅವಶ್ಯಕತೆ ಇರುವುದಿಲ್ಲ. ಗೃಹಪ್ರವೇಶ ಮತ್ತಿತರ ಸಣ್ಣಪುಟ್ಟ ಕಾರ್ಯಕ್ರಮಕ್ಕೆ ಯಾವುದೇ ಅನುಮತಿ ಬೇಕಾಗಿಲ್ಲ. ಮದ್ಯಪಾನ ಕಾರ್ಯಕ್ರಮದಲ್ಲಿ ಬಳಸುವುದಾದರೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದರು.
ಜಿಲ್ಲೆಯಲ್ಲಿ ಊರ ಹಬ್ಬ, ದೇವಾಲಯ ವಾರ್ಷಿಕೋತ್ಸವ, ಅನುಮತಿಯ ಬದಲು ಕಡ್ಡಾಯವಾಗಿ ಮಾಹಿತಿಯನ್ನು ತಾಲೂಕು ದಂಡಾಧಿಕಾರಿಗಳಿಗೆ ನೀಡಬೇಕು. ಯಾವುದೇ ಕಾರಣಕ್ಕೂ ಚುನಾವಣೆ ಪ್ರಚಾರಕ್ಕೆ ವೇದಿಕೆಯನ್ನು ಬಳಸಿಕೊಳ್ಳಬಾರದು. ಜಮ್ಮ ಹಿಡುವಳಿದಾರರು ಕೋವಿಯನ್ನು ಸಮೀಪದ ಪೊಲೀಸ್ ಠಾಣೆಗೆ ಒಪ್ಪಿಸಬೇಕಾಗಿಲ್ಲ. ಒಂದೊಮ್ಮೆ ಐದು ವರ್ಷ ಕ್ರಿಮಿನಲ್ ಪ್ರಕರಣದಲ್ಲಿ ಜೈಲುವಾಸ ಸೇರಿದ್ದರೆ ಕೋವಿಯನ್ನು ಸಮೀಪದ ಠಾಣೆಗೆ ಠೇವಣಿ ಇಡಬೇಕು ಎಂದರು.
ಲೈಸನ್ಸ್ ಹೊಂದಿರುವವರು ಕೋವಿಯನ್ನು ಪೊಲೀಸ್ ಠಾಣೆಯಲ್ಲಿ ಕಡ್ಡಾಯವಾಗಿ ಠೇವಣಿ ಇಡಬೇಕು. ಒಂದೊಮ್ಮೆ ಕಾಡುಪ್ರಾಣಿಗಳ ಉಪಟಳ ಮತ್ತಿತರ ಅತ್ಯವಶ್ಯಕ ಕಾರಣಕ್ಕಾಗಿ ಕೋವಿಯ ಅವಶ್ಯಕತೆ ಇದ್ದರೆ ಪೊಲೀಸ್ ಠಾಣೆಯಲ್ಲಿ ಲಿಖಿತ ರೂಪದಲ್ಲಿ ಮಾಹಿತಿಗಳನ್ನು ನೀಡಿ ಅನುಮತಿಯನ್ನು ಪಡೆದುಕೊಳ್ಳಬಹುದಾಗಿದೆ. ಕೊಡಗು ಜಿಲ್ಲೆಯ ಎಲ್ಲಾ ಗಡಿ ಭಾಗದಲ್ಲಿ ಜಿಲ್ಲೆಗೆ ಬರುವ ಎಲ್ಲಾ ವಾಹನಗಳ ತಪಾಸಣಾ ದಿನದ ೨೪ ಗಂಟೆ ನಡೆಸಲಾಗುವುದು. ದಾಖಲಾತಿ ಇಲ್ಲದ ಹಣ ಮತ್ತು ವಸ್ತುಗಳನ್ನು ಸಾಗಿಸುವಂತಿಲ್ಲ ಒಟ್ಟಿನಲ್ಲಿ ಶಾಂತಿಯುತ ಚುನಾವಣೆ ನಡೆಸಲು ಸಕಲ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜ್ ತಿಳಿಸಿದರು.
ಭಾರತ ಚುನಾವಣಾ ಆಯೋಗವು ಸಿ-ವಿಜಿಲ್ ಎಂಬ ಮೊಬೈಲ್ ಆ್ಯಪ್‌ನ್ನು ಅಭಿವೃದ್ಧಿಪಡಿಸಿದ್ದು, ಈ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಂಡು, ಚುನಾವಣೆಯಲ್ಲಿ ಮತದಾರರಿಗೆ ಅಕ್ರಮವಾಗಿ ಹಣ, ಗೃಹ ಬಳಕೆ ಸಾಮಗ್ರಿಗಳನ್ನು, ಮದ್ಯವನ್ನು ಹಂಚಿಕೆ ಮಾಡುವ ಬಗ್ಗೆ ಹಾಗೂ ಯಾವುದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ಆ್ಯಪ್‌ನಲ್ಲಿ ವಿಡಿಯೊ ಮತ್ತು ಚಿತ್ರಗಳ ಮೂಲಕ ದೂರು ಸಲ್ಲಿಸಬಹುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ಸುಳ್ಳು ಸುದ್ದಿಗಳನ್ನು ಹರಡುವುದು, ಕೋಮುಸೌಹಾರ್ದತೆ ಹಾಳಾಗುವಂತಹ ಸಂದೇಶಗಳನ್ನು ಹರಡುವುದನ್ನು ನಿಷೇಧಿಸಲಾಗಿದೆ. ಇಂತಹ ಕೃತ್ಯಗಳು ಕಂಡು ಬಂದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಮಡಿಕೇರಿ ಉಪವಿಭಾಗಾಧಿಕಾರಿ ಕೆ.ನರ್ವಡೆ ವಿನಾಯಕ್ ಇದ್ದರು.
ಮತಗಟ್ಟೆ ಅಧಿಕಾರಿಗಳ ನೇಮಕ
ಚುನಾವಣಾ ಆಯೋಗದ ಸೂಚನೆಯಂತೆ ಪ್ರತಿ ಮತಗಟ್ಟೆಗಳಿಗೆ ಒಬ್ಬರು ಅಧ್ಯಕ್ಷಾಧಿಕಾರಿ ಮತ್ತು ೩ ಮತಗಟ್ಟೆ ಅಧಿಕಾರಿಗಳನ್ನು ಹಾಗೂ ಮೀಸಲು ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು. ಕೇಂದ್ರ ಸರ್ಕಾರಿ ಅಧಿಕಾರಿ / ಸಿಬ್ಬಂದಿಗಳನ್ನು ಆಯ್ದ ಮತಗಟ್ಟೆಗಳಿಗೆ ಮೈಕ್ರೋ ವೀಕ್ಷಕರನ್ನಾಗಿ ನೇಮಕ ಮಾಡಲು ಕ್ರಮ ವಹಿಸಲಾಗಿದೆ. ಮಾದರಿ ನೀತಿ ಸಂಹಿತೆ ಹಾಗೂ ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾ ಇಡಲು ತಂಡಗಳ ರಚನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟರಾಜಾ ತಿಳಿಸಿದರು.
ಅಂಚೆ ಮೂಲಕ ಮತದಾನ
೮೫ ವರ್ಷ ಮೇಲ್ಟಟ್ಟ ಹಿರಿಯ ನಾಗರೀಕರಿಗೆ, ವಿಶೇಷ ಚೇತನ, ಕೋವಿಡ್ ಶಂಕಿತ / ದೃಢಪಟ್ಟ ಮತದಾರರಿಗೆ ಹಾಗೂ ಅಗತ್ಯ ಸೇವೆಗಳ ಇಲಾಖೆಗಳ ನಿರತ ಅಧಿಕಾರಿ / ಸಿಬ್ಬಂದಿಗಳಿಗೆ ವಿಶೇಷವಾಗಿ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ. ಅಂಚೆ ಮತಪತ್ರಕ್ಕೆ ನಮೂನೆ ೧೨ಡಿ ರಲ್ಲಿ ನಾಮಪತ್ರಕ್ಕೆ ಸಲ್ಲಿಸಲು ಪ್ರಾರಂಭವಾದ ದಿನಾಂಕದಿಂದ ೫ ದಿನದೊಳಗಾಗಿ ಸಂಬಂಧಪಟ್ಟ ಸಹಾಯಕ ಚುನಾವಣಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟರಾಜಾ ತಿಳಿಸಿದರು.
೨೦೨೪ ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಪ್ರತಿಯೊಬ್ಬ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಅಡತಡೆಗಳಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಭಾರತ ಚುನಾವಣಾ ಆಯೋಗದ ನಿಯಮಗಳಂತೆ ಕಟ್ಟುನಿಟ್ಟಾಗಿ ಪಾಲಿಸಿ ಚುನಾವಣೆ ನಡೆಸಲು ಪ್ರತಿಯೊಬ್ಬರು ಸಹಕಾರ ನೀಡಬೇಕು.ವೆಂಕಟರಾಜಾ, ಕೊಡಗು ಜಿಲ್ಲಾಧಿಕಾರಿ