ಶಾನುವಳ್ಳಿಯಲ್ಲಿ ಮರುಮತದಾನ

web 1
Published on

ಕೊಪ್ಪ: ಸಣ್ಣಪುಟ್ಟ ಘರ್ಷಣೆಗಳನ್ನು ಹೊರತುಪಡಿಸಿ ತಾಲೂಕಿನ 21 ಗ್ರಾಪಂನ 189 ಸ್ಥಾನಗಳಿಗೆ ಶೇ.80 ರಷ್ಟು ಮತದಾನವಾಗಿದೆ. ಮಧ್ಯಾಹ್ನದವರೆಗೆ ನಿಧಾನವಾಗಿ ನಡೆದ ಮತದಾನ ಪ್ರಕ್ರಿಯೆ ಮಧ್ಯಾಹ್ನ ಬಿರುಸುಗೊಂಡಿತು.

ನರಸೀಪುರ ಗ್ರಾಪಂನ ಮತಗಟ್ಟೆ ಸಂಖ್ಯೆ 1ರಲ್ಲಿ ಮತಗಟ್ಟೆ ಹೊರಗೆ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುತ್ತಿರುವುದಕ್ಕೆ ಮತ್ತೊಂದು ಪಕ್ಷದ ಬೆಂಬಲಿತ ಅಭ್ಯರ್ಥಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಎರಡು ಗುಂಪುಗಳ ನಡುವೆ ಕೆಲ ವೇಳೆ ವಾಗ್ವಾದ ನಡೆಯಿತು. ಕೊಪ್ಪ ಗ್ರಾಮಾಂತರ ಪಂಚಾಯಿತಿ ಮೇಲಿನ ಪೇಟೆ ಮತಗಟ್ಟೆಗೆ ವಾಹನದಲ್ಲಿ ಮತದಾರರನ್ನು ಕರೆ ತರುವ ವಿಷಯವಾಗಿ ಎರಡು ಗುಂಪುಗಳ ಮಧ್ಯೆ ವಾಕ್​ಸಮರ ನಡೆಯಿತು.

ಅಸಗೋಡು ಗ್ರಾಪಂನ ದಾಸನಕೊಡಿಗೆ ಮತಗಟ್ಟೆ ಸಮೀಪ ಮತ ಪ್ರಚಾರ ನಡೆಸುತ್ತಿರುವುದಕ್ಕೆ ಎರಡು ಗುಂಪುಗಳ ನಡುವಿನ ವಾಗ್ವಾದ ನಡೆದು ಬೀಗುವಿನ ವಾತವರಣ ನಿರ್ವಣವಾಗಿತ್ತು. ನಂತರ ಸಕಾಲದಲ್ಲಿ ಪೊಲೀಸರ ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.

ಹೆಚ್ಚಿನ ಮತಗಟ್ಟೆಗಳಲ್ಲಿ ಮತದಾನಕ್ಕೆ ಬಂದವರು ಮತದಾರರ ಪಟ್ಟಿಯಿಂದ ತಮ್ಮ ಹೆಸರು ತೆಗೆದುಹಾಕಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ವಾಸವಿದ್ದರೂ ಉದ್ದೇಶಪೂರ್ವಕವಾಗಿ ಹೆಸರನ್ನು ತೆಗೆದುಹಾಕಲಾಗಿದೆ ಎಂದು ದೂರಿದರು.

ಶ್ಯಾನುವಳ್ಳಿ ಗ್ರಾಪಂನ ಮತಗಟ್ಟೆ ಸಂಖ್ಯೆ 19ರಲ್ಲಿ ಮತಪತ್ರಗಳು ಅದಲು ಬದಲಾಗಿದ್ದರಿಂದ ಮತದಾನ ಪ್ರಕ್ರಿಯೆಗೆ ಸ್ವಲ್ಪ ಹೊತ್ತು ಅಡಚಣೆಯಾಯಿತು. ಕೊಪ್ಪ ಗ್ರಾಮಾಂತರ ಗ್ರಾಪಂಗೆ ಸೇರಿದ ಮತಪತ್ರಗಳನ್ನು ಮತದಾರರಿಗೆ ನೀಡಿ 19 ಮಂದಿ ಮತದಾನವನ್ನು ಮಾಡಿದ್ದರು. ಕೂಡಲೇ 19 ಮತಪತ್ರಗಳನ್ನು ಅಸಿಂಧುಗೊಳಿಸಿ ಮತದಾನ ಮಾಡಿದ 19 ಮಂದಿಯನ್ನು ವಾಪಸ್ ಕರೆಸಿ ಮತಗಟ್ಟೆ ಸಂಖ್ಯೆ 19ಕ್ಕೆ ಸಂಬಂಧಪಟ್ಟ ಮತಪತ್ರಗಳನ್ನು ನೀಡಿ ಮರುಮತದಾನ ಮಾಡಲು ಅವಕಾಶ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net