ಸುಸೂತ್ರವಾಗಿ ಮತದಾನ ಸಂಪನ್ನ

25 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಅತ್ಯಂತ ಕುತೂಹಲ ಕೆರಳಿಸಿದ್ದ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆಯ ಮತದಾನ ಪ್ರಕ್ರಿಯೆ ಭಾನುವಾರ ಸುಸೂತ್ರವಾಗಿ ನಡೆದಿದ್ದು, ಒಟ್ಟು 44 ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ.

ಸಂಘದ ಒಟ್ಟು 15 ಸ್ಥಾನಗಳಿಗೆ ನಡೆದ ಚುನಾವಣೆಗೆ 44 ಅಭ್ಯರ್ಥಿಗಳು ಸ್ಪಧಿರ್ಸಿದ್ದಾರೆ. ಸಂಘದ ಒಟ್ಟು 9104 ಸದಸ್ಯರ ಪೈಕಿ ಶೇ. 50 ಸದಸ್ಯರು ಮತ ಚಲಾಯಿಸಿದ್ದಾರೆ. ಮೇ 26ರಂದು ಬೆಳಗ್ಗೆ 9 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಸಂಜೆ ಹೊತ್ತಿಗೆ ಸ್ಪಷ್ಟ ಫಲಿತಾಂಶ ಸಿಗಲಿದೆ.

ಭಾನುವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಎಲ್ಲ ಅಭ್ಯರ್ಥಿಗಳು ಮೊದಲಿಗರಾಗಿ ಮತ ಚಲಾಯಿಸಿದರು. ಬೆಳಗ್ಗೆ 10 ಗಂಟೆವರೆಗೂ ಮಂದಗತಿಯಲ್ಲಿದ್ದ ಮತದಾನ ನಂತರದಲ್ಲಿ ಚುರುಕುಗೊಂಡಿತು. ಮಳೆ ನಡೆವೆಯೂ ಸದಸ್ಯರು ಮತದಾನಕ್ಕೆ ಆಗಮಿಸಿದ್ದರು. ಆವರಣಕ್ಕೆ ಸದಸ್ಯರು ಆಗಮಿಸುತ್ತಿದ್ದಂತೆ ಅಭ್ಯರ್ಥಿಗಳು ತಮ್ಮ ಮುದ್ರಿತ ಕರಪತ್ರಗಳನ್ನು ನೀಡಿ ಮತ ನೀಡುವಂತೆ ಕೈ ಮುಗಿಯುತ್ತಿದ್ದ ದೃಶ್ಯ ಸಮಾನ್ಯವಾಗಿತ್ತು.

ಮಧ್ಯಾಹ್ನ ಕೆಲ ಹೊತ್ತು ಹೊರತು ಪಡಿಸಿ ಬೆಳಗ್ಗೆಯಿಂದ ಸಂಜೆ ವರೆಗೂ ಮತದಾರರು ಗುಂಪು ಗುಂಪಾಗಿ ಬಂದು ಸಾಲಿನಲ್ಲಿ ನಿಂತು ಮತದಾನದ ದೃಶ್ಯಗಳು ಕಂಡು ಬಂದವು. ಮೊದಲ ಬಾರಿಗೆ ಮತ ಚಲಾಯಿಸುತ್ತಿದ್ದ ಕೆಲ ಸದಸ್ಯರು ಗೊಂದಲಕ್ಕೀಡಾಗಿದ್ದರು. ಸಾಮಾನ್ಯ ಚುನಾವಣೆಗಳಿಗಿಂತ ಭಿನ್ನವಾದ ಮತ ಚಲಾವಣೆ ಇಲ್ಲಿರುವ ಕಾರಣ ಗೊಂದಲ ಉಂಟಾಗಿತ್ತು. ನಂತರದಲ್ಲಿ ಮತದಾನ ಮಾಡುವ ಬಗೆ ತಿಳಿದು ಮತ ಚಲಾಯಿಸಿದರು.

ಹಿರಿಯ ಸದಸ್ಯರಾದ ವೀರಣ್ಣ ರಾಜೂರ, ಡಾ. ವೀಣಾ ಶಾಂತೇಶ್ವರ, ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ. ಹೇಮಾ ಪಟ್ಟಣಶೆಟ್ಟಿ ಸೇರಿ ಬಹುತೇಕ ಸಾಹಿತಿಗಳು, ಕನ್ನಡಾಭಿಮಾನಿಗಳು, ಉದ್ಯಮಿಗಳು, ಪತ್ರಕರ್ತರು, ರಾಜಕಾರಣಿಗಳಾದ ಸಂಸದ ಜಗದೀಶ ಶೆಟ್ಟರ್​, ಡಾ. ವೀರಣ್ಣ ಮತ್ತಿಕಟ್ಟಿ, ಶಾಸಕ ಎನ್​.ಎಚ್​. ಕೋನರಡ್ಡಿ, ಎಸ್​.ವಿ. ಸಂಕನೂರ ಸೇರಿ ಧಾರವಾಡ, ಬೆಳಗಾವಿ, ಹಾವೇರಿ, ಗದಗ ಮತ್ತು ರಾಜ್ಯದ ಇತರೆ ಜಿಲ್ಲೆಗಳಲ್ಲಿನ ಸದಸ್ಯರು ಮತ ಚಲಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net