

ಬ್ಯಾಡಗಿ: ಪಟ್ಟಣದಲ್ಲಿರುವ ಬಡವರಿಗೆ ಸರ್ಕಾರಿ ನಿವೇಶನ ಹಂಚಿಕೆ ಮಾಡದೆ ಇರುವುದನ್ನು ವಿರೋಧಿಸಿ ಬೆಟ್ಟದ ಮಲ್ಲೇಶ್ವರ ಬಡಾವಣೆ ನಿವಾಸಿಗಳು ಮತದಾನ ಬಹಿಷ್ಕಾರ ( ವೋಟಿಂಗ್ ಬ್ಯಾನ್ ) ಮಾಡುವುದಾಗಿ ಶನಿವಾರ ಪ್ರತಿಭಟನೆ ನಡೆಸಿದರು.
ನಿವಾಸಿಗಳ ಪರ ಮಾತನಾಡಿದ ಪರೀದಾಭಾನು ನದೀಮುಲ್ಲಾ, ಒಂದೂವರೆ ದಶಕದಿಂದ ಇಲ್ಲಿನ ಸಾವಿರಾರು ಬಡಕುಟುಂಬಗಳು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿವೆ.
2017ರಲ್ಲಿ ಪುರಸಭೆ ಮಲ್ಲೂರು ರಸ್ತೆಯಲ್ಲಿ 10 ಎಕರೆ ಜಾಗ ಖರೀದಿಸಿದೆ.
ಅಭಿವೃದ್ಧಿಗಾಗಿ 50 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದು, 814 ಜಿ ಪ್ಲಸ್ ಮಾದರಿ ನಿವೇಶನ ಸಹಿತ ಮನೆಗೆ 30 ಸಾವಿರ ರೂ. ಪಡೆದು ಮೂರು ವರ್ಷ ಕಳೆದರೂ ಅತ್ತ ಹಣವನ್ನೂ ನೀಡಿಲ್ಲ, ಇತ್ತ ನಿವೇಶನವನ್ನೂ ಕೊಡಲಿಲ್ಲ.
ಹತ್ತಾರು ಬಾರಿ ಪುರಸಭೆ ಎದುರು ಉಪವಾಸ ಸತ್ಯಾಗ್ರಹ, ಪ್ರತಿಭಟನೆ, ರಸ್ತೆ ಬಂದ್, ಶಾಸಕ, ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರೂ ಪ್ರಯೋಜವಾಗಿಲ್ಲ ಎಂದು ದೂರಿದರು.
ನಮಗೆ ಹಕ್ಕುಪತ್ರ ನೀಡುವವರೆಗೂ ನಾವು ಮತದಾನದಿಂದ ದೂರ ಉಳಿಯುವುದಾಗಿ ಎಚ್ಚರಿಸಿದರು.
ಗುಡ್ಡಪ್ಪ ಆಡಿನವರ, ಪ್ರೇಮವ್ವ ದೊಡ್ಮನಿ, ಗಿರಿಜವ್ವ ಗುಮ್ಮನಹಳ್ಳಿ, ರವಿ ಬಂಡಿವಡ್ಡರ, ಜ್ಯೋತಿ ದುರಮುರಗೇರ, ಸತೀಶ ಜಾಧವ, ಮಹದೇವಪ್ಪ ಕುಂಬಾರ, ಸವಿತಾ ಕೆಂಗೊಂಡ, ಜರಿನಾ ಕಲ್ಮನಿ, ಸುಧಾ ಬೇವಿನಮರದ, ಚೌಡವ್ವ ಚಿನ್ನಮ್ಮನವರ, ಅಂಬಕ್ಕ ಬೋವಿ, ಲಕ್ಷ್ಮವ್ವ ಒಳಗುಂದಿ, ರತ್ನಮ್ಮ ಹುರಕಡ್ಲಿ, ಗುಡ್ಡಪ್ಪ ಗಂಗಮ್ಮನವರ ಇತರರಿದ್ದರು.