ಪತ್ರದ ಮೂಲಕ ಮತದಾನ ಜಾಗೃತಿ

3 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಇತ್ತೀಚಿನ ದಿನಗಳಲ್ಲಿ ಕುಟುಂಬಸ್ಥರ ಕುಶಲೋಪರಿ ಮೊಬೈಲ್​ನಲ್ಲೇ ನಡೆಯುತ್ತಿರುವುದರಿಂದ ಪತ್ರ ಬರೆಯುವವರೇ ಇಲ್ಲ. ಆದರೆ ವಸತಿ ಶಾಲೆ ಮಕ್ಕಳು ತಮ್ಮ ಪಾಲಕರು ಸೇರಿ ಕುಟುಂಬಸ್ಥರಿಗೆ ಪತ್ರ ಬರೆಯುವ ಮೂಲಕ ಮತದಾನ ಜಾಗೃತಿ ಮೂಡಿಸಿದ್ದು ವಿಶೇಷ.
ಪ್ರೀತಿಯ ತಂದೆಯವರಿಗೆ, ತಾಯಿಯವರಿಗೆ, ಅಣ್ಣಂದಿರಿಗೆ, ಅಕ್ಕಂದಿರಿಗೆ ನಮ್ಮ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಮೇ. 7 ರಂದು ಲೋಕಸಭಾ ಚುನಾವಣೆಯಲ್ಲಿ ತಪ್ಪದೆ ಮತದಾನ ಮಾಡಿ ಎಂದು ಪತ್ರ ಬರೆಯುವ ಮೂಲಕ ಮತದಾನ ಜಾಗೃತಿ ಮೂಡಿಸಿದ್ದಾರೆ.
ಧಾರವಾಡದ ಮೆಟ್ರಿಕ್​ ನಂತರದ ವಸತಿ ಶಾಲೆಯಲ್ಲಿನ ವಿದ್ಯಾಥಿರ್ಗಳಿಗೆ ತಮ್ಮ ಪಾಲಕರಿಗೆ ಪತ್ರ ಬುಧವಾರ ಪತ್ರ ಬರೆದಿದ್ದಾರೆ. ಮತದಾನದಿಂದ ದೂರ ಉಳಿಯದೆ ನಿಮ್ಮ ಮತದಾನದ ಹಕ್ಕನ್ನು ಚಲಾಯಿಸಿ. ಸದೃಢ ಭಾರತ ನಿರ್ಮಾಣಕ್ಕೆ ಕೈ ಜೋಡಿಸಿರಿ ಎಂದು ಪತ್ರಗಳ ಮೂಲಕ ಮನವಿ ಮಾಡಿದ್ದಾರೆ.
ಸುಮಾರು 3&4 ದಶಕಗಳ ಹಿಂದೆ ಜನರಿಗೆ ಪತ್ರಗಳ ಮೂಲಕವೇ ತಮ್ಮ ಕುಟುಂಬಸ್ಥರ ಮನೆಗಳಲ್ಲಿನ ವಿದ್ಯಮಾನಗಳ ಬಗ್ಗೆ ಮಾಹಿತಿ ದೊರೆಯುತ್ತಿತ್ತು. ಇಂದು ಮೊಬೈಲ್​, ಅಂತರ್ಜಾಲ, ಮಾಹಿತಿ ತಂತ್ರಜ್ಞಾನ ಬೆಳವಣಿಗೆಯಿಂದ ಪತ್ರ ಬರೆಯುವ ವ್ಯವಸ್ಥೆಯೇ ಮಾಯವಾಗಿದೆ. ಆದರೆ ಈ ಮಕ್ಕಳು ಪಾಲಕರಿಗೆ ಪತ್ರ ಬರೆಯುವ ಮೂಲಕ ಕಡ್ಡಾಯ ಮತದಾನಕ್ಕೆ ಪ್ರೇರಣೆ ನೀಡಿದ್ದಾರೆ. ಮಕ್ಕಳ ಪತ್ರ ಬರೆದಿರುವುದನ್ನು ಓದಿದಾಗ ಪಾಲಕರಿಗೆ ಖುಷಿ ನೀಡುವುದರ ಜತೆಗೆ ತಪ್ಪದೇ ಮತ ಚಲಾಯಿಸುವುದರಿಂದ ಮತದಾನ ಪ್ರಮಾಣ ಹೆಚ್ಚಳವಾಗಲಿದೆ ಎಂಬುದು ಇದರ ಉದ್ದೇಶವಾಗಿದೆ.
ಸ್ವೀಪ್​ ನೋಡಲ್​ ಅಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿದರು. ಜಿಪಂ ಯೋಜನಾ ನಿರ್ದೇಶಕ ದೀಪಕ ಮಡಿವಾಳರ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಗೋಪಾಲ, ವಿವಿಧ ಇಲಾಖೆ ಅಧಿಕಾರಿಗಳು, ವಿದ್ಯಾಥಿರ್ಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net