ಮತದಾನ ನಾಗರಿಕರಿಗಿರುವ ಬ್ರಹ್ಮಾಸ್ತ್ರ

6kmr1
ಕಮಲನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾಕ್ಕೆ ಡಿಸಿ ಗೋವಿಂದರಡ್ಡಿ ಹಸಿರು ಬಾವುಟ ತೋರಿಸಿ ಚಾಲನೆ ನೀಡಿದರು. ಎಸ್‌ಪಿ ಚನ್ನಬಸವಣ್ಣ ಲಂಗೋಟಿ, ಜಿಪಂ ಸಿಇಒ ಡಾ.ಗಿರೀಶ್ ಬದೋಲೆ, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಗೌತಮ ಅರಳಿ, ಜಿಯಾವುಲ್ಲ ಕೆ., ಅಮಿತಕುಮಾರ ಕುಲಕರ್ಣಿ, ಶಿವಕುಮಾರ ಘಾಟೆ ಇತರರಿದ್ದರು.
Published on

ಕಮಲನಗರ: ಮತದಾನ ಮಾಡುವುದು ನಿಜವಾದ ದೇಶಪ್ರೇಮ. ಏಕಕಾಲದಲ್ಲಿ ಹಕ್ಕು, ಕರ್ತವ್ಯ ಮತ್ತು ಅಧಿಕಾರ ಚಲಾಯಿಸಲು ಇರುವ ಏಕೈಕ ಮಾಧ್ಯಮವೇ ಮತದಾನ. ನಾಗರಿಕರಿಗೆ ಮತದಾನ ಎಂಬುದು ಬ್ರಹ್ಮಾಸ್ತ್ರವಿದ್ದಂತೆ ಎಂದು ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಚುನಾವಣಾಧಿಕಾರಿ ಗೋವಿಂದರಡ್ಡಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ. ತಾಲೂಕು ಆಡಳಿತ ಸಹಯೋಗದಡಿ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಅವರು, ಪ್ರಜಾಪ್ರಭುತ್ವದ ಮುಖ್ಯ ತಳಹದಿ ಎಂದರೆ ಮತದಾನ. ಆದರೆ ಈ ಬಗ್ಗೆ ಜನರಲ್ಲಿ ಸರಿಯಾದ ತಿಳಿವಳಿಕೆ ಇಲ್ಲ. ನ್ಯಾಯಯುತ, ಮುಕ್ತ, ನಿರ್ಭೀತ, ಆಮಿಷರಹಿತ ಚುನಾವಣೆ ನಡೆಯಬೇಕು. ನ್ಯಾಯಸಮ್ಮತ ಮತದಾನ ನಡೆಯದಿದ್ದರೆ ಪ್ರಜಾಪ್ರಭುತ್ವಕ್ಕೆ ಅಪಮಾನ ಎಸಗಿದಂತಾಗುತ್ತದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಲಂಗೋಟಿ ಮಾತನಾಡಿ, ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳುವ ಮೂಲಕ ಭವಿಷ್ಯದ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುವ ಹಾಗೂ ದೇಶದ ರಕ್ಷಣೆ ಬಗ್ಗೆ ಚಿಂತನೆಗೆ ನೆರವಾಗಬೇಕು ಎಂದು ಕೋರಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗರೀಶ್ ಬದೋಲೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಗೌತಮ ಅರಳಿ, ಸಹಾಯಕ ಚುನಾವಣಾಧಿಕಾರಿ ಜಿಯಾವುಲ್ಲ ಕೆ., ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ, ಗ್ರೇಡ್-೨ ತಹಸೀಲ್ದಾರ್ ರಮೇಶ ಪೆದ್ದೆ, ತಾಪಂ ಇಒ ಶಿವಕುಮಾರ ಘಾಟೆ, ತಾಪಂ ಎಡಿ ಹಣಮಂತರಾಯ ಕೌಟಗೆ, ಬಿಇಒ ಡಾ.ಟಿ.ಆರ್. ದೊಡ್ಡೆ, ಟಿಎಚ್‌ಒ ಡಾ.ಗಾಯತ್ರಿ, ಎಇಇ ಸುಭಾಷ, ಸಿಪಿಐ ಅಮರೆಪ್ಪ ಎಸ್., ಶಿವಾನಂದ ಪಾಟೀಲ್, ಗುಂಡಪ್ಪ ಬೆಲ್ಲೆ ಇತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಮೆರುಗು ತಂದ ಮೆರವಣಿಗೆ: ಪಟ್ಟಣದ ಸಿದ್ಧರಾಮೇಶ್ವರ ಪದವಿ ಮಹಾವಿದ್ಯಾಲಯ ಎದುರು ಶನಿವಾರ ಬೆಳಗ್ಗೆ ವಿವಿಧ ಇಲಾಖೆ ನೌಕರರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹಸಿರು ಬಾವುಟ ತೋರಿಸಿ ಜಾಥಾಕ್ಕೆ ಚಾಲನೆ ನೀಡಿದರು. ನೌಕರರು ತಮ್ಮ ಇಲಾಖೆ ಬ್ಯಾನರ್ ಅಡಿ ಬಿಳಿ ಟೀ ಶರ್ಟ್, ಟೋಪಿ ಹಾಕಿ ಜಾಥಾದಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು. ಆಶಾ-ಅಂಗನವಾಡಿ ಕಾರ್ಯಕರ್ತೆಯರು ಮೆರುಗು ನೀಡಿದರು. ರಸ್ತೆಯುದ್ದಕ್ಕೂ ಮತದಾನದ ಮಹತ್ವದ ಕುರಿತ ಘೋಷಣೆಗಳನ್ನು ಕೂಗಲಾಯಿತು. ಮೆರವಣಿಗೆಯು ಅಲ್ಲಮಪ್ರಭು ವೃತ್ತ, ಎಸ್‌ಬಿಐ, ಪೊಲೀಸ್ ಠಾಣೆ, ಪ್ರವಾಸಿ ಮಂದಿರ, ಜಿಪಿಎಸ್ ಶಾಲೆ, ಡಾ.ಚನ್ನಬಸವ ಪಟ್ಟದ್ದೇವರು ಸ್ಮಾರಕ ಭವನ ಮೂಲಕ ತಹಸಿಲ್‌ಗೆ ಆಗಮಿಸಿ ಸಮಾವೇಶಗೊಂಡಿತು.

ಡಿಸಿ-ಎಸ್‌ಪಿ ಕಾಮೆಂಟರಿ: ಜಾಥಾ ಅಂಗವಾಗಿ ಸರ್ಕಾರಿ ನೌಕರರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಾಲಿಬಾಲ್ ಪಂದ್ಯಾವಳಿ ವೇಳೆ ಜಿಲ್ಲಾಧಿಕಾರಿ ಗೋವಿಂದರಡ್ಡಿ ಹಾಗೂ ಎಸ್‌ಪಿ ಚನ್ನಬಸವಣ್ಣ ಕಾಮೆಂಟರಿ ಹೇಳುವ ಸಭಿಕರ ಗಮನ ಸೆಳೆದರು. ಕಂದಾಯ ಇಲಾಖೆ ನೌಕರರು ಮತ್ತು ಶಿಕ್ಷಕರ ನಡುವಿನ ಫೈನಲ್ ಪಂದ್ಯದಲ್ಲಿ ಡಿಸಿ ಮತ್ತು ಎಸ್‌ಪಿ ಕಾಮೆಡಿ ಕಾಮೆಂಟರಿ ಮಾಡಿ ಕ್ರೀಡಾಳುಗಳನ್ನು ಹುರಿದುಂಬಿಸಿದರು.

ಭಾರತೀಯ ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೆ ಮತದಾನ ಎಂಬ ಪ್ರಮುಖ ಹಕ್ಕು ನೀಡಿದೆ. ಎಲ್ಲರೂ ಈ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಬೇಕು. ಜಿಲ್ಲೆಯಲ್ಲಿ ದಾಖಲೆ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಗಟ್ಟಿತನ ತೋರಿಸಿಕೊಡಬೇಕಿದೆ.
| ಗೋವಿಂದರಡ್ಡಿ ಜಿಲ್ಲಾ ಚುನಾವಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net