ಅಂತರಸಂತೆಯಲ್ಲಿ ಮತದಾನ ಜಾಗೃತಿ

21
Published on

ಮೈಸೂರು: ಮತದಾನ ಮಾಡುವುದು ನಮ್ಮ ಆದ್ಯ ಕರ್ತವ್ಯ. ಹಾಗಾಗಿ ಮತದಾನದ ದಿನ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎಂದು ಎಚ್.ಡಿ.ಕೋಟೆ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ.ಧರಣೇಶ್ ಹೇಳಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ಮಂಗಳವಾರ ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಆಟೋ ನಿಲ್ದಾಣದ ಆವರಣದಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮತದಾನ ಮಾಡುವುದು ನಿಮ್ಮ ಹಕ್ಕು. ಏ.26ರ ಶುಕ್ರವಾರ ಬೆಳಗ್ಗೆ 7 ರಿಂದ ಸಂಜೆ 6ರವರಗೆ ಮತದಾನ ಪ್ರಕ್ರಿಯೆಯ ನಡೆಯಲಿದ್ದು, ಪ್ರಜಾಪ್ರಭುತ್ವ ಬಲಪಡಿಸುವ ನಿಟ್ಟಿನಲ್ಲಿ ಮತ ಚಲಾಯಿಸಿ ಶೇಕಡವಾರು ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಹೇಳಿದರು.
ಯಾವುದೇ ರೀತಿಯ ಆಮಿಷಗಳಿಗೆ ಒಳಗಾಗದೆ ನೈತಿಕ ಚುನಾವಣೆಯನ್ನು ಬೆಂಬಲಿಸುವ ಮೂಲಕ ನಿಮ್ಮ ಮತದ ಮೌಲ್ಯವನ್ನು ಹೆಚ್ಚಿಸಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಹಾಗಾಗಿ ಯಾರೊಬ್ಬರೂ ಮತದಾನದಿಂದ ದೂರ ಉಳಿಯಬಾರದು ಎಂದು ಹೇಳಿದರು.
ಮಾಳದ ಹಾಡಿ ಯುವಕ, ಯುವತಿಯರು ಆಕರ್ಷಕ ಕೋಲಾಟ ನೃತ್ಯ ಮಾಡುವ ಮೂಲಕ ಮತ ಜಾಗೃತಿ ಮೂಡಿಸಿದರು. ಬಳಿಕ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಿಗೆ ಮತದಾನ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ತಾಲೂಕು ಯೋಜನಾಧಿಕಾರಿ ರಂಗಸ್ವಾಮಿ, ಪಿಡಿಒಗಳಾದ ರಮೇಶ್, ಪ್ರಭಾಕರ್, ಸುರೇಶ್, ವಿವಿಧ ಸಂಘಟನೆಗಳ ಶ್ರೀಕಾಂತ್, ನಿಂಗರಾಜು, ಗ್ರಾಪಂ ಸಿಬ್ಬಂದಿ, ಗ್ರಾಪಂ ಒಕ್ಕೂಟದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net