

ಬೇಲೂರು: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಅರೇಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಸಾರ್ವಜನಿಕರಿಗೆ ವಿದ್ಯುನ್ಮಾನ ಮತಯಂತ್ರದ ಪ್ರಾತ್ಯಕ್ಷಿಕೆ ಮತ್ತು ಮತದಾನದ ಬಗ್ಗೆ ಅರಿವು ಮೂಡಿಸಲಾಯಿತು.
ಹೊಸದಾಗಿ ಸೇರ್ಪಡೆಗೊಂಡಿರುವ ಮತದಾರರಿಗೆ ಮತ ಚಲಾವಣೆ, ಮತ ಯಂತ್ರ ಮತ್ತು ಮತ ಚಲಾವಣೆ ಬಗ್ಗೆ ತಾಪಂ ಇಒ ಸತೀಶ್ ಮಾತನಾಡಿ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದರು.
ಯುವ ಮತದಾರರು ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಗೆ ನೋಂದಾಯಿಸಿಕೊಳ್ಳುವ ಮೂಲಕ ಸಂವಿಧಾನಿಕ ಹಕ್ಕನ್ನು ಪಡೆದುಕೊಂಡು ದೇಶದ ಅಭಿವೃದ್ಧಿ ಮತ್ತು ಆಡಳಿತಕ್ಕೆ ಯೋಗ್ಯವಾದವರನ್ನು ಆಯ್ಕೆ ಮಾಡಲು ಮತ ಹಾಕಬೇಕು ಎಂದರು.
ಮತದಾನ ಯಾರಿಗೆ ಮಾಡಲಾಗಿದೆ ಎಂಬುವುದನ್ನು ಖಾತರಿ ಪಡಿಸಿಕೊಳ್ಳಲು ವಿ.ವಿ ಪ್ಯಾಟ್ ಸಹಕಾರಿಯಾಗಲಿದೆ. ವಿದ್ಯುನ್ಮಾನ ಮತ ಯಂತ್ರವು ತನ್ನದೇ ಆದ ಬ್ಯಾಟರಿ ಹೊಂದಿದೆ. ಈ ಯಂತ್ರಕ್ಕೆ ಇತರೆ ಯಾವುದೇ ಅಂತರ್ಜಾಲದ ಅಥವಾ ಯಾವುದೇ ಸಂಪರ್ಕವಿರುವುದಿಲ್ಲ. ಹಾಗಾಗಿ ಇಲ್ಲಿ ಮತ ದುರ್ಬಳಕೆಯಾಗಲು ಸಾಧ್ಯವಿಲ್ಲ. ಈ ಬಗ್ಗೆ ಅನುಮಾನ ಬೇಡ ಎಂದರು.
ಮತಯಂತ್ರ, ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ ಮತ್ತು ವಿವಿ ಪ್ಯಾಟ್ ಕುರಿತು ಅವರು ಸಾರ್ವಜನಿಕರಿಗೆ ಸಮಗ್ರ ಮಾಹಿತಿ ನೀಡಿದರು. ಗ್ರಾಪಂ ಅಧ್ಯಕ್ಷ ಸಂಕಪ್ಪ, ಉಪಾಧ್ಯಕ್ಷ ವಿಘ್ನೇಶ, ಸದಸ್ಯರಾದ ಶಶಿಕುಮಾರ, ಪಿಸಿಒ ನಾರಾಯಣ, ಬೂತ್ ಮಟ್ಟದ ಅಧಿಕಾರಿಗಳು ಇದ್ದರು.