ನಾಳೆ ವಿಧಾನಸಭೆ ಮತದಾನ

09mdk09
Published on

ಮಡಿಕೇರಿ:

ಮತದಾನ ಬುಧವಾರ(ಮೇ ೧೦) ಬೆಳಗ್ಗೆ ೭ರಿಂದ ಸಂಜೆ ೬ ಗಂಟೆ ತನಕ ನಡೆಯಲಿದೆ. ಇದಕ್ಕಾಗಿ ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೫೪೩ ಮತಗಟ್ಟೆಗಳಿದ್ದು, ಒಟ್ಟು ೪,೫೬,೩೧೩ ಮತದಾರರಿದ್ದಾರೆ. ಇದರಲ್ಲಿ ೨,೨೪,೮೭೫ ಪುರುಷರು ಮತ್ತು ೨,೩೧,೪೧೫ ಮಹಿಳೆಯರು ಹಾಗೂ ೨೩ ಇತರ ಮತದಾರರು ಸೇರಿದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ೨,೩೨,೧೪೮ ಮತದಾರರಿದ್ದು, ೧,೧೩,೫೮೫ ಪುರುಷರು, ೧,೧೮,೫೫೩ ಮಹಿಳಾ ಮತದಾರರು ಹಾಗೂ ೧೦ ಮಂದಿ ಇತರ ಮತದಾರರು ಇದ್ದಾರೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ೨,೨೪,೧೬೫ ಮತದಾರರಿದ್ದು, ೧,೧೧,೨೯೦ ಪುರುಷ ಮತ್ತು ೧,೧೨,೮೬೨ ಮಹಿಳಾ ಮತದಾರರು ಹಾಗೂ ೧೩ ಇತರ ಮತದಾರರು ಇದ್ದಾರೆ.

ಈ ಚುನಾವಣೆಯಲ್ಲಿ ವಿಶೇಷಚೇತನರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಮತ ಚಲಾಯಿಸಲು ಅನುಕೂಲವಾಗುವಂತೆ ವಿಶೇಷ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ.

ಮತದಾನ ಕೇಂದ್ರಗಳಲ್ಲಿ ಗಾಲಿ ಕುರ್ಚಿ ವ್ಯವಸ್ಥೆ ಹಾಗೂ ಸಂಜ್ಞಾ ಭಾಷಾ ವ್ಯಾಖ್ಯಾನಕಾರರ ವ್ಯವಸ್ಥೆ ಮಾಡಲಾಗುವುದು. ಮತದಾನ ಕೇಂದ್ರಕ್ಕೆ ಬಂದು ಹೋಗಲು ಉಚಿತ ಸಾರಿಗೆ ವ್ಯವಸ್ಥೆ. ಮತದಾನ ಕೇಂದ್ರದಲ್ಲಿ ಸಹಾಯಕರ ಸೇವೆ ಒದಗಿಸಲಾಗುತ್ತಿದೆ.

ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ, ವಿವಿಧ ಸಂಘ ಸಂಸ್ಥೆಗಳಿಗೆ ಮತ್ತು ಖಾಸಗಿ ಸಂಸ್ಥೆಗಳಿಗೆ (ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಬುಧವಾರ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಡಿ-ಮಸ್ಟರಿಂಗ್ ಕಾರ್ಯ ಮುಗಿದ ನಂತರ ವಿದ್ಯುನ್ಮಾನ ಮತಯಂತ್ರಗಳು ಹಾಗೂ ಚುನಾವಣಾ ದಾಖಲೆ ಪತ್ರಗಳನ್ನು ಅಂದೇ ಮಡಿಕೇರಿ ಸಂತ ಜೊಸೇಫರ ಕಾನ್ವೆಂಟ್‌ನಲ್ಲಿ ಇರುವ ಭದ್ರತಾ ಕೊಠಡಿಗೆ ತಂದು ದಾಸ್ತಾನು ಮಾಡಲಾಗುವುದು.

ಮತ ಎಣಿಕೆ:
ಮೇ ೧೩ ರಂದು ಬೆಳಗ್ಗೆ ೮ ರಿಂದ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಎರಡೂ ವಿಧಾನಸಭಾ ಕ್ಷೇತ್ರದ ಎಣಿಕೆ ಕಾರ್ಯ ಮಡಿಕೇರಿ ಸಂತ ಜೊಸೇಫರ ಕಾನ್ವೆಂಟ್‌ನಲ್ಲಿ ಬೇರೆ ಬೇರೆ ಎಣಿಕೆ ಕೇಂದ್ರದಲ್ಲಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net