

ಮಡಿಕೇರಿ: ಅಭಿವೃದ್ಧಿ ದೃಷ್ಟಿಯಿಂದ ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಬದಲಾವಣೆ ತರಲಿದ್ದಾರೆ ಎಂದು ಮಡಿಕೇರಿ ಕ್ಷೇತ್ರದ ಆಕಾಂಕ್ಷಿ ಯುವ ಮುಖಂಡ ಡಾ.ಮಂಥರ್ ಗೌಡ ಹೇಳಿದರು.
ಮೂರ್ನಾಡುವಿನ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಮುರ್ನಾಡು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಅಭಿವೃದ್ಧಿಯನ್ನು ಮಾಡದೆ ಬಿಜೆಪಿ ಕಡೆಗಣಿಸಿದೆ. ಈ ಹಿನ್ನೆಲೆ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯ ಮತದಾರರು ಬದಲಾವಣೆ ಬಯಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಸಚಿವ ಬಿ.ಎ.ಜೀವಿಜಯ ಮಾತನಾಡಿ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಉಳಿವಿಗಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಆಕಾಂಕ್ಷಿ ಮತ್ತು ಸಮಾಜ ಸೇವಕ ಹರಪನಹಳ್ಳಿ ರವೀಂದ್ರ ಮಾತನಾಡಿ, ಕೊಡಗು ಜಿಲ್ಲೆ ಪಕೃತಿದತ್ತ ಸಂಪನ್ಮೂಲಗಳನ್ನು ಹೊಂದಿದೆ. ಅದನ್ನು ವ್ಯವಸ್ಥಿತ ಹಾಗೂ ಪರಿಣಾಮಕಾರಿಯಾಗಿ ಬಳಕೆ ಮಾಡಲು ಯೋಜನೆ ರೂಪಿಸುವಲ್ಲಿ ಈಗಿನ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಈ ನಿಟ್ಟಿನಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಮೂಲಕ ಬದಲಾವಣೆ ತರಬೇಕು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಬೂತ್ ಮಟ್ಟದ ಸಮಿತಿಯವರು ಮನೆಮನೆಗೆ ತೆರಳಿ ಈಗಿನಿಂದಲೇ ಜನರ ಮನವೊಲಿಸಿ ಚುನಾವಣೆಗೆ ಸಿದ್ದತೆ ನಡೆಸಲು ಸೂಚಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ.ಹಂಸ, ಮೂರ್ನಾಡುವಿನಲ್ಲಿ ಪಕ್ಷ ಸಂಘಟನೆ ಬಲವಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಮತಗಳಿಕೆಯಾಗುವ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂಧರ್ಭದಲ್ಲಿ ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ಜಯೇಂದ್ರರವರ ನೇತೃತ್ವದಲ್ಲಿ ಬ್ಲಾಕ್ ಎಸ್.ಸಿ.ಘಟಕದ ಪಧಾದಿಕಾರಿಗಳು ಹಾಗೂ ಯುವ ಕಾಂಗ್ರೆಸ್ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಸಭೆಯಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಗೋವಿಂದರಾಜ್ ದಾಸ್, ಡಿಸಿಸಿ ಪ್ರಮುಖರಾದ ಪಾಪು ಸಣ್ಣಯ್ಯ, ಮಂದ್ರಿರ ಮೋಹನ್ ದಾಸ್, ಬ್ಲಾಕ್ ಪ್ರಮುಖರಾದ ಯಶ್ ದೋಲ್ಪಾಡಿ, ರವಿಗೌಡ, ಶಾಫಿ ಕೊಟ್ಟಮುಡಿ, ಮೂರ್ನಾಡು ವಲಯ ಕಾಂಗ್ರೆಸ್ ಅಧ್ಯಕ್ಷ ಕೇಶವ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.