

ಆರ್.ಕೃಷ್ಣ ಮೈಸೂರು
‘ಲಕ್ಷ್ಮಣ್ ಗೆದ್ದರೆ ನಾನು ಗೆದ್ದಂತೆ’ ಎಂದು ಅಬ್ಬರದ ಪ್ರಚಾರ ನಡೆಸಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಜನತೆ ಕಾಂಗ್ರೆಸ್ ಕೈ ಬಿಟ್ಟಿದ್ದಾರೆ.
ಅಲ್ಲದೇ ಪಂಚ ಗ್ಯಾರಂಟಿಗಳು ‘ಕೈ’ ಹಿಡಿಯಲಿದೆ ಎನ್ನುವ ಕಾಂಗ್ರೆಸ್ ಮುಖಂಡರ ಅಪಾರ ನಂಬಿಕೆಯೂ ಈ ಚುನಾವಣೆಯಲ್ಲಿ ಹುಸಿಯಾಗಿದೆ.
ಲೋಕಸಭೆ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಮೈಸೂರು-ಕೊಡಗು ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಲ್ಕು ಸುತ್ತಿನ ಪ್ರಚಾರ ನಡೆಸಿದರೂ ಮತದಾರರು ರಾಜವಂಶಸ್ಥರಿಗೆ ಮಣೆ ಹಾಕಿದ್ದಾರೆ. ಹೀಗಾಗಿ ಈ ಬಾರಿ ಕ್ಷೇತ್ರವನ್ನು ಮರಳಿ ತೆಕ್ಕೆಗೆ ತೆಗೆದುಕೊಳ್ಳಬೇಕು ಎನ್ನುವ ಕಾಂಗ್ರೆಸ್ ಕನಸು ಭಗ್ನಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲದೇ ಪ್ರಭಾವಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಅವರು ಜಿಲ್ಲೆಯರೇ ಆಗಿದ್ದು, ವ್ಯಾಪಕ ಪ್ರಚಾರ ನಡೆಸಿದ್ದರು. ಮುಖಂಡರು, ಕಾರ್ಯಕರ್ತರೊಂದಿಗೆ ಅನೇಕ, ತಂತ್ರ, ಸಭೆಗಳನ್ನು ನಡೆಸಿದರೂ ಮತದಾರ ಮನ್ನಣೆ ನೀಡಿಲ್ಲ. ಹೀಗಾಗಿ ಬಿಜೆಪಿ ಗೆಲುವಿನ ಅಭಿಯಾನ ಮುಂದುವರಿದಿದ್ದು, ಹ್ಯಾಟ್ರಿಕ್ ಜಯ ದಾಖಲಿಸಿದೆ.
ಕಾಂಗ್ರೆಸ್‌ನಲ್ಲಿದ್ದಾರೆ ಹೆಚ್ಚು ಶಾಸಕರು:
ಮೈಸೂರು-ಕೊಡಗು ಲೋಕಸಭಾ ವ್ಯಾಪ್ತಿಗೆ ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ಚಾಮುಂಡೇಶ್ವರಿ, ಹುಣಸೂರು, ಪಿರಿಯಾಪಟ್ಟಣ, ಮಡಿಕೇರಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳು ಸೇರುತ್ತವೆ. ಈ ಕ್ಷೇತ್ರಗಳಲ್ಲಿ ಐವರು ಕಾಂಗ್ರೆಸ್, ಇಬ್ಬರು ಜೆಡಿಎಸ್, ಒಬ್ಬರು ಬಿಜೆಪಿ ಶಾಸಕರಿದ್ದಾರೆ. ಇದರಿಂದ ಕಾಂಗ್ರೆಸ್ ಹೆಚ್ಚು ಮತ ಪಡೆದು ಗೆಲ್ಲುತ್ತದೆ ಎಂದೇ ಅಂದಾಜಿಸಲಾಗಿತ್ತು. ಆದರೆ ಅಂಚೆ ಮತ ಎಣಿಕೆ ಸೇರಿದಂತೆ ಆರಂಭದಿಂದಲೂ ಬಿಜೆಪಿ ಮುನ್ನಡೆ ಸಾಧಿಸಿಕೊಂಡ ಬಂದಿತ್ತು.
ಕಾಂಗ್ರೆಸ್ ಶಾಸಕರು ಇರುವ ನರಸಿಂಹರಾಜ ಕ್ಷೇತ್ರದಲ್ಲಿ 76,597 ಬಾರಿ ಮುನ್ನಡೆ ಹಾಗೂ ಪಿರಿಯಾಪಟ್ಟಣದಲ್ಲಿ 11,744 ಹೆಚ್ಚುವರಿ ಮತಗಳನ್ನು ಪಡೆದಿದ್ದು ಬಿಟ್ಟರೆ ಉಳಿದ ಆರು ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿ ಯದುವೀರ್ ಮುನ್ನಡೆ ಕಾಯ್ದುಕೊಂಡರು.
ಮನ್ನಣೆ ನೀಡದ ಮತದಾರ:
ಕಾಂಗ್ರೆಸ್‌ನಲ್ಲಿ ಹಲವು ವರ್ಷಗಳ ಬಳಿಕ ಒಕ್ಕಲಿಗರಿಗೆ ಟಿಕೆಟ್ ನೀಡಲಾಗಿದೆ ಎಂದು ಕ್ಷೇತ್ರದಲ್ಲಿ ಒಕ್ಕಲಿಗಾಸ್ತ್ರ ಪ್ರಯೋಗಿಸಿದರೂ ಮತದಾರ ಮಾತ್ರ ಜಾತಿ ಸೂತ್ರಕ್ಕೆ ಅಂಟಿಕೊಂಡಿಲ್ಲ. ಸಚಿವ ಕೆ.ವೆಂಕಟೇಶ್ ಅವರು ಒಕ್ಕಲಿಗಾಸ್ತ್ರವನ್ನು ಪ್ರಬಲವಾಗಿ ಪ್ರಯೋಗಿಸಿ ಮತದಾರರನ್ನು ಸೆಳೆಯಲು ಯತ್ನಿಸಿದರು. ಆದರೆ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರು ಜೆಡಿಎಸ್ ಪರ ಇನ್ನೂ ಇದ್ದಾರೆ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಅಭ್ಯರ್ಥಿ ಯದುವೀರ್ ಅವರಿಗೆ ಮನ್ನಣೆ ನೀಡಿದ್ದಾರೆ.
ಹ್ಯಾಟ್ರಿಕ್ ಕನಸು ಹೊತ್ತಿದ್ದ ಸಂಸದರಾಗಿದ್ದ ಪ್ರತಾಪಸಿಂಹ ಅವರಿಗೆ ಟಿಕೆಟ್ ಕೈ ತಪ್ಪುತ್ತಿದ್ದಂತೆಯೇ ಎಚ್ಚೆತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಚಾಣಾಕ್ಷತನ ಪ್ರಯೋಗಿಸಿ ಒಕ್ಕಲಿಗಾಸ್ತ್ರ ಬಿಟ್ಟಿದ್ದರು. ಅಲ್ಲದೇ ಸಮುದಾಯದ ಮುಖಂಡರಾದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕರೆಸಿ ಒಕ್ಕಲಿಗರು ಹೆಚ್ಚಾಗಿರುವ ಕಡೆ ವ್ಯಾಪಕ ಪ್ರಚಾರ ನಡೆಸಿದ್ದರು.
ಇದಕ್ಕೆ ಪ್ರತಿಯಾಗಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಮಾಜಿ ಸಚಿವ ಸಾ.ರಾ.ಮಹೇಶ್, ಶಾಸಕ ಜಿ.ಡಿ.ಹರೀಶ್‌ಗೌಡ ಸೇರಿದಂತೆ ಇನ್ನಿತರ ಮುಖಂಡರು ಒಕ್ಕಲಿಗ ಮತಗಳು ಕೈನತ್ತ ವಾಲುವುದನ್ನು ತಡೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದಾರೆ.
ಬಾಕ್ಸ್
ಸೋಲಿನಿಂದ ಹೊರಬರಲಾಗದ ಲಕ್ಷ್ಮಣ್
ಸಾಮಾಜಿಕ ಹೋರಾಟದ ಮೂಲಕ ತಮ್ಮನ್ನು ಗುರುತಿಸಿಕೊಂಡಿರುವ ಕಾಂಗ್ರೆಸ್ ರಾಜ್ಯ ವಕ್ತಾರ ಎಂ.ಲಕ್ಷ್ಮಣ್ ಅವರು ಚುನಾವಣೆ ಸೋಲಿನಿಂದ ಹೊರ ಬರಲು ಈ ಬಾರಿಯೂ ಸಾಧ್ಯವಾಗಲಿಲ್ಲ.
ದಕ್ಷಿಣ ಪದವೀಧರ ಕ್ಷೇತ್ರ, ಶಿಕ್ಷಕರ ಕ್ಷೇತ್ರ, ಚಾಮರಾಜ ಕ್ಷೇತ್ರದಲ್ಲಿ ಪಕ್ಷೇತರರಾಗಿ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿ ಒಟ್ಟು ನಾಲ್ಕು ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಈಗ ಲೋಕಸಭೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರೂ ಯಶಸ್ಸು ಕಾಣಲು ಸಾಧ್ಯವಾಗದೆ ನಿರಾಸೆ ಅನುಭವಿಸಿದ್ದಾರೆ.
ಪಕ್ಷೇತರವಾಗಿ ರಾಜಕೀಯದಲ್ಲಿ ಯಶಸ್ಸು ದೊರೆಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರಿದ್ದರು. ಪಕ್ಷದಲ್ಲಿ ಜವಾಬ್ದಾರಿಯುತ ವಕ್ತಾರ ಸ್ಥಾನದಲ್ಲಿರುವ ಅವರು, ಪ್ರತಿಪಕ್ಷಗಳ ನಾಯಕರ ವಿರುದ್ಧ ಅದರಲ್ಲೂ ಸಂಸದರಾಗಿದ್ದ ಪ್ರತಾಪಸಿಂಹ ವಿರುದ್ಧ ಸುದ್ದಿಗೋಷ್ಠಿಗಳಲ್ಲಿ ಹರಿಹಾಯುತ್ತಿದ್ದರು. ತಮ್ಮ ನಾಯಕರ ವಿರುದ್ಧ ಬರುವ ಆರೋಪಗಳಿಗೆ ಹೇಳಿಕೆಗಳ ಮೂಲಕ ಪ್ರತ್ಯುತ್ತರ ನೀಡುತ್ತಾ ಗುರುತಿಸಿಕೊಂಡಿದ್ದರು. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನೆಚ್ಚಿನವರಾಗಿದ್ದರು.
ಟಿಕೆಟ್ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವರ ಹೆಸರು ಕೇಳಿ ಬಂದಿತ್ತಾದರೂ ಅಂತಿಮವಾಗಿ ಅಳೆದೂ ತೂಗಿ ವರಿಷ್ಠರು ಒಕ್ಕಲಿಗರಿಗೆ ಟಿಕೆಟ್ ನೀಡಬೇಕು ಎಂದು ಲಕ್ಷ್ಮಣ್ ಅವರನ್ನು ಕಣಕ್ಕೆ ಇಳಿಸಿತ್ತು. ಆದರೆ ಈ ಪ್ರಯತ್ನ ಈಡೇರಿಲಿಲ್ಲ.