

ಮುಳಬಾಗಿಲು: ಕೋಮುಲ್ ನಿರ್ದೇಶಕರ ಚುನಾವಣೆಗೆ ಮುಳಬಾಗಿಲು ಪೂರ್ವ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್.ಆರ್.ರಾಜೇಂದ್ರ ಗೌಡ, ಪಶ್ಚಿಮ ಕ್ಷೇತ್ರದಿಂದ ಎಂ.ಸಿ.ಸರ್ವಜ್ಞಗೌಡ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ ಎಂದು ಕೋಲಾರ ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು.
ನಗರದ ಹೊರವಲಯದಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಡೇರಿ ಕಟ್ಟಡ ನಿಮಾರ್ಣಕ್ಕೆ ನಾನು ವೈಯಕ್ತಿಕವಾಗಿ 2 ಲಕ್ಷ ರೂ. ನೀಡಿದ್ದೇನೆ. ಪ್ಲಾಸ್ಟಿಕ್ ಕ್ಯಾನ್ಗಳಲ್ಲಿ ಡೇರಿಗೆ ಹಾಲು ಹಾಕುವುದರಿಂದ ಹಾಲಿನ ಗುಣಮಟ್ಟ ಕಡಿಮೆ ಬರುತ್ತಿದ್ದು. ಇದರಿಂದ ಸ್ವಂತ ಖರ್ಚಿನಿಂದ ಹಾಲಿನ ಕ್ಯಾನ್ಗಳನ್ನು ವಿತರಿಸಲಾಗಿದೆ. ಹಾಗಾಗಿ ಮತದಾರರು ಇಂತಹ ಸೇವೆಯನ್ನು ಗುರುತಿಸುತ್ತಾರೆ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಹಿಂದಿನ ರೀತಿಯಲ್ಲಿ ಸೇವೆ ಮುಂದುವರಿಯಲಿದೆ ಎಂದರು.
ಭಿನ್ನಾಭಿಪ್ರಾಯವಿಲ್ಲ. ನಮ್ಮ ಪಕ್ಷದಲ್ಲಿ ನಿರ್ದೇಶಕ ಸ್ಥಾನಕ್ಕೆ 8 ಮಂದಿ ಅಭ್ಯರ್ಥಿಗಳಿದ್ದರು. ಹಾಗಾಗಿ ಅಭ್ಯರ್ಥಿಗಳ ಘೋಷಣೆ ತಡವಾಗಿದೆ. ನಮ್ಮಲ್ಲಿ ಭಿನ್ನಾಭಿಪ್ರಾಯಗಳು ಇಲ್ಲ ಎಂದು ಕೊತ್ತೂರು ಮಂಜುನಾಥ್ ತಿಳಿಸಿದರು. ಮುಂದಿನ ಚುನಾವಣೆಗಳನ್ನು ಎದುರಿಸಲು ಮುಳಬಾಗಿಲು ತಾಲೂಕಿನಲ್ಲಿ ಸಿದ್ಧನಿದ್ದೇನೆ. ಈ ಬಾರಿ ಕ್ಷೇತ್ರದ ವಿಂಗಡನೆ ಹೊಸದಾದರೂ ಸಹ ಇಲ್ಲಿನ ಜನ ಮತ್ತು ತಾಲೂಕು ನನಗೆ ರಾಜಕೀಯ ಮಾಡಲು ಹೊಸದೇನಲ್ಲ. ಹಾಗಾಗಿ ಪ್ರತಿಯೊಂದು ಹಳ್ಳಿ, ಪ್ರತಿಯೊಬ್ಬರೂ ನನಗೆ ಗೊತ್ತು ಎಂದರು.
ಎಂಎಲ್ಸಿ ಅನೀಲ್ ಕುಮಾರ್, ಕಾಂಗ್ರೆಸ್ ಮುಖಂಡ ವಿ.ಆದಿನಾರಾಯಣ, ಮುಳಬಾಗಿಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮಾನುಲ್ಲಾ, ಅಭ್ಯರ್ಥಿಗಳಾದ ಆರ್.ಆರ್.ರಾಜೇಂದ್ರ ಗೌಡ, ಎಂ.ಸಿ.ಸರ್ವಜ್ಞ ಗೌಡ, ಮುಖಂಡರಾದ ರಾಮಲಿಂಗರೆಡ್ಡಿ, ಉತ್ತನೂರು ಶ್ರೀನಿವಾಸ್, ಆಲಂಗೂರು ಶಿವಣ್ಣ, ಗುಜ್ಜನಹಳ್ಳಿ ಮಂಜುನಾಥ್, ಕೆ.ಎನ್.ಉಮಾಶಂಕರ್, ಗೊಲ್ಲಹಳ್ಳಿ ವೆಂಕಟೇಶ್ಮ, ಎಂ.ವೆಂಕಟರಮಣ, ಎಂ.ಮುನಿರಾಜು, ಅಮರ್ ಇದ್ದರು.
ಬ್ಲಾಕ್ಮೇಲ್ ರಾಜಕಾರಣ ಬೇಡ
ನಾವು ಡೇರಿ ಎಲೆಕ್ಷನ್ನಲ್ಲಿ ಒಳ್ಳೆಯವರನ್ನು ಕುಡುಕರನ್ನಾಗಿಸುವುದಿಲ್ಲ. ಕಿಡ್ನಾಪ್ ಮಾಡುವುದಿಲ್ಲ. ಪ್ರವಾಸಕ್ಕೆ ಕರೆದುಕೊಂಡು ಹೋಗುವುದಿಲ್ಲ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಚುನಾವಣೆಗೆ 15 ಮತಗಳು ನಮ್ಮ ಬಳಿ ಇದ್ದರೂ ಸಹ ಒಂದು ಮತದ ಅಂತರದಿಂದ ಸೋಲಬೇಕಾಯಿತು. ಏಕೆಂದರೆ ಕೆಲವರು ಮತದಾರರಿಗೆ ಮದ್ಯಪಾನ ಮಾಡಿಸಿ, ವಿಡಿಯೋ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಅಲ್ಲದೆ ಶನಿ ಮಹಾತ್ಮ ದೇವರ ಫೋಟೋ ಮೇಲೆ ಪ್ರಮಾಣ ಮಾಡಿಸಿಕೊಂಡು ಮತಪಡೆದು ಗೆಲುವು ಸಾಧಿಸಿದ್ದಾರೆ. ಇಂತಹ ಗೆಲುವು ನಮಗೆ ಬೇಕಿಲ್ಲ ಎಂದರು.
ಜೆಡಿಎಸ್ನಿಂದ ಪೂರ್ವದ ಅಭ್ಯರ್ಥಿ ಡೆಲಿಗೇಟ್ ಫಾರಂಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಮತದಾರರನ್ನು ಬೆದರಿಸಿ ಅವರಿಂದ ಮತವನ್ನು ಕಸಿದುಕೊಳ್ಳುವ ಜಾಯಮಾನ ನಮ್ಮದಲ್ಲ. ಇಂತಹದಕ್ಕೆ ಭಯಪಡುವ ವ್ಯಕ್ತಿ ನಾನಲ್ಲ ಎಂದರು. ನಾನು ಡಿಸಿಸಿ ಬ್ಯಾಂಕ್ನ ನಿರ್ದೇಶಕನಾಗಿರುವುದು ಸಹ ಮುಳಬಾಗಿಲಿನಿಂದಲೇ. ಇದನ್ನು ಕೆಲವರು ಗಮನದಲ್ಲಿಟ್ಟುಕೊಳ್ಳಬೇಕು. ಒಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನವನ್ನು ಪಡೆದುಕೊಂಡ ತಕ್ಷಣ ಎಲ್ಲವೂ ನಮ್ಮದೇ ಎನ್ನುವ ಭ್ರಮೆಯನ್ನು ಮೊದಲು ಕೈಬಿಡಬೇಕು ಎಂದರು.