ಮತಪಟ್ಟಿಯಲ್ಲಿ ಹೆಸರು ಕೈಬಿಟ್ಟಿದ್ದಕ್ಕೆ ಮತದಾರನ ಆಕ್ರೋಶ

24 HANUR 3
ಮತದಾರರ ಪಟ್ಟಿಯಲ್ಲಿ ಹೆಸರು ಕೈ ಬಿಟ್ಟಿರುವುದನ್ನು ಖಂಡಿಸಿ ಪಾಲೀಮೇಡು ಗ್ರಾಮದ ಮರುದ ಎಂಬಾತ ಕುಟುಂಬಸ್ಥರೊಂದಿಗೆ ಮಾರ್ಟಳ್ಳಿ ಗ್ರಾಪಂ ಮುಂಭಾಗ ಪ್ರತಿಭಟನೆ ನಡೆಸಿದರು.
Published on

ಹನೂರು : ಮತದಾರರ ಪಟ್ಟಿಯಲ್ಲಿ ಹೆಸರನ್ನು ಕೈ ಬಿಟ್ಟಿರುವುದನ್ನು ಖಂಡಿಸಿ ಬುಧವಾರ ತಾಲೂಕಿನ ಪಾಲಿಮೇಡು ಗ್ರಾಮದ ವ್ಯಕ್ತಿಯೊಬ್ಬ ಕುಟುಂಬಸ್ಥರೊಂದಿಗೆ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದರು.

ಈ ವೇಳೆ ಮತದಾನದಿಂದ ವಂಚಿತನಾಗಿರುವ ಮರುದ ಎಂಬಾತ ಮಾತನಾಡಿ, ನನ್ನ ಹೆಸರು ಮತದಾರರ ಪಟ್ಟಿಯಲ್ಲಿದ್ದು, ಈ ಹಿಂದೆ ನಡೆದ ಚುನಾವಣೆಗಳಲ್ಲಿ ಮತ ಚಲಾಯಿಸಿದ್ದೇನೆ. ಆದರೆ ಇದೀಗ ನನ್ನ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಬೇಜಾವಬ್ದಾರಿತನದಿಂದ ಉತ್ತರ ನೀಡಿದ್ದಾರೆ. ಇತ್ತ ಜನಪ್ರತಿನಿಧಿಗಳು ಗಮನಹರಿಸುತ್ತಿಲ್ಲ. ಇದರಿಂದ ದೇಶದ ಪ್ರಜೆಯಾಗಿರುವ ನಾನು ಲೋಕಸಭೆಯ ಚುನಾವಣೆಯಲ್ಲಿ ಮತದಾನದಿಂದ ವಂಚಿತನಾಗಬೇಕಿದೆ. ಮತದಾನ ನನ್ನ ಹಕ್ಕು. ಆದ್ದರಿಂದ ಮತದಾನ ಮಾಡುವಂತೆ ಅವಕಾಶ ಮಾಡಿಕೊಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದಲ್ಲಿ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದರು.

ಸುದ್ದಿ ತಿಳಿದು ಆರ್‌ಐ ಶಿವಕುಮಾರ್, ಗ್ರಾಮ ಆಡಳಿತ ಅಧಿಕಾರಿ ಸುರೇಶ್ ಸ್ಥಳಕ್ಕಾಗಮಿಸಿ ವಾಸ್ತವ ಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಚುನಾವಣೆ ಮುಗಿದ ಬಳಿಕ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆಗೊಳಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net