

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಹಾಗೂ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಸಾರ್ವಜನಿಕ ಪ್ರಕಟಣೆಯಂತೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ತಿನ ಚುನಾವಣೆ ನಡೆಸುವ ಸಂಬಂಧ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ ನಡೆಸಲಾಗುತ್ತಿದೆ. ಅದರಂತೆ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ ಬಗ್ಗೆ ಸೆ.30 ರಂದು ಪ್ರಕಟಣೆ ಹೊರಡಿಸಲಾಗಿದೆ. ನಮೂನೆ 19 ರಲ್ಲಿ ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ ಸಲ್ಲಿಸಲು ನ.6 ಕೊನೆಯ ದಿನವಾಗಿದೆ. ಕರಡು ಮತದಾರರ ಪಟ್ಟಿಯನ್ನು ಅ.25 ರಂದು ಪ್ರಕಟಿಸಲಾಗುತ್ತಿದೆ. ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಲು ನ. 25 ರಿಂದ ಡಿ.10 ವರೆಗೆ ಕಾಲಾವಕಾಶವಿದೆ. ಡಿ.30 ರಂದು ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ-19ರ ಅರ್ಜಿಗಳನ್ನು ಆಯಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಾಲೂಕು ಕಚೇರಿಗಳಲ್ಲಿ ಅರ್ಜಿ ಸ್ವೀಕರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾನದಂಡಗಳು: ಬೆಂಗಳೂರು ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯ ಸಾಮಾನ್ಯ ನಿವಾಸಿ ಆಗಿರಬೇಕು (ಈ ಕ್ಷೇತ್ರದ ವ್ಯಾಪ್ತಿಗೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಹಾಗೂ ರಾಮನಗರ ಜಿಲ್ಲೆಗಳು ಒಳಗೊಂಡಿರುತ್ತದೆ) ಅರ್ಹತಾ ದಿನಾಂಕ ಹಿಂದಿನ 6 ವರ್ಷಗಳ ಅವಧಿಯ ಪೈಕಿ ಕನಿಷ್ಟ 3 ವರ್ಷದ ಅವಧಿಯಲ್ಲಿ ರಾಜ್ಯ ಸರ್ಕಾರದಿಂದ ಮಾನ್ಯತೆ ಹೊಂದಿರುವ ಅಥವಾ ಮಾನ್ಯತೆ ಹೊಂದಿರುವುದಾಗಿ ಘೋಷಿಸಲ್ಪಟ್ಟಿರುವ ಸೆಕೆಂಡರಿ ಶಾಲೆಗಿಂತ ಕಡಿಮೆ ಇಲ್ಲದ ಯಾವುದೇ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ವೃತ್ತಿಯಲ್ಲಿ ಕಾರ್ಯ ನಿರ್ವಹಿಸಿರಬೇಕು. ಸೆಕೆಂಡರಿ ಶಾಲೆ ಅಂದರೆ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿನ ಪ್ರೌಢಶಾಲೆ ವಿಭಾಗದಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿರಬೇಕು. ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಖಾಯಂ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರಬೇಕು ಹಾಗೂ ಪಾರ್ಟ್ ಟೈಂ’ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಲ್ಲಿ ನೋಂದಣಿಗೆ ಅವಕಾಶವಿರುವುದಿಲ್ಲ.
ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬೇಕು:
ಅರ್ಜಿದಾರರು ಶಿಕ್ಷಕ ವೃತ್ತಿಯಲ್ಲಿ ತೊಡಗಿರುವ ಬಗ್ಗೆ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳಿಂದ ದೃಢೀಕೃತ ದಾಖಲೆ, ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಮತದಾರರ ಪಟ್ಟಿ ನೋಂದಣಿಗೆ ಅರ್ಜಿದಾರರ ವಾಸಸ್ಥಳವು ಅರ್ಹತೆಯಾಗಿದ್ದು, ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಯ ಸ್ಥಳವು ಪರಿಗಣಿಸಲ್ಪಡುವುದಿಲ್ಲ. ಮತದಾರರ ಪಟ್ಟಿ ಸೇರ್ಪಡೆಗೆ ಕನ್ನಡ ಅಥವಾ ಅಂಗ್ಲ ಭಾಷೆಯ ನಮೂನೆ-19 ರಲ್ಲಿ ಅರ್ಜಿ ಸಲ್ಲಿಸಬಹುದು. ಭಾವಚಿತ್ರವಿರುವ ಮತದಾರರ ಪಟ್ಟಿಯನ್ನು ಸಿದ್ದಪಡಿಸಲಾಗುವುದರಿಂದ ಅರ್ಜಿದಾರರು 2 ಇತ್ತೀಚಿನ ಭಾವಚಿತ್ರಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಇಲಾಖಾ ವ್ಯಾಪ್ತಿಯಡಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಮಾನದಂಡಗಳಡಿಯಲ್ಲಿ ಅರ್ಹತೆ ಹೊಂದಿರುವ ಶಿಕ್ಷಕರಿಂದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.