

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ 9,05,724 ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್.ಶಿವಶಂಕರ್ ಮಾಹಿತಿ ನೀಡಿದರು.
ದೇವನಹಳ್ಳಿಯ ಜಿಲ್ಲಾಡಳಿತಭವನದಲ್ಲಿ ಮಂಗಳವಾರ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2025 ರ ಸಂಬಂಧ ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲೆಯ ನಾಲ್ಕು ತಾಲೂಕುಗಳ ಮತಗಟ್ಟೆಗಳಲ್ಲಿ, ಮತದಾರ ನೋಂದಣಾಧಿಕಾರಿ ಕಚೇರಿಯಲ್ಲಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಸಾರ್ವಜನಿಕರ ಮಾಹಿತಿಗೆ ಪ್ರಕಟಿಸಲಾಗಿದೆ. 2024ರ ವಾರ್ಷಿಕ ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ 1ನೇ ಜನವರಿ, 1ನೇ ಏಪ್ರಿಲ್, 1ನೇ ಜುಲೈ ಮತ್ತು 1ನೇ ಅಕ್ಟೋಬರ್ 2024 ಕ್ಕೆ 18 ವರ್ಷ ತುಂಬುವ ಯುವ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮುಂಗಡ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಇದರಿಂದ 18 ವರ್ಷಗಳನ್ನು ಪೂರೈಸಿದ ಯುವಕರು ನೋಂದಣಿಗಾಗಿ ಮುಂದಿನ ವರ್ಷದ ವಿಶೇಷ ಪರಿಷ್ಕರಣೆಯವರೆಗೆ ಕಾಣುವುದನ್ನು ತಪ್ಪಿಸಲಾಗಿದೆ ಮತ್ತು ಮಧ್ಯಂತರ ಅವಧಿಯಲ್ಲಿ ನಡೆಯುವ ಚುನಾವಣೆಗೆಳಲ್ಲಿ ಮತ ಚಲಾವಣೆಗೆ ಅವಕಾಶ ದೊರೆಯಲಿದೆ ಎಂದರು.
ಮಹಿಳಾ ಮತದಾರರು ಹೆಚ್ಚು: ನಾಲ್ಕು ತಾಲೂಕಗಳಲ್ಲಿ 4,46,918 ಪುರುಷ ಮತ್ತು 4,58,659 ಮಹಿಳಾ ಹಾಗೂ 147 ಇತರೆ ಮತದಾರರು ಇದ್ದಾರೆ. ಒಟ್ಟು ಮತದಾರರ ಪೈಕಿ 85 ವರ್ಷ ಮೇಲ್ಪಟ್ಟ 11,114 ಹಿರಿಯ ನಾಗರಿಕರು, 13,431 ವಿಶೇಷ ಚೇತನ ಮತದಾರರು ಹಾಗೂ 121 ಸೇವಾ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಜಿಲ್ಲೆಯ 4 ತಾಲೂಕುಗಳಲ್ಲಿನ ಮತದಾರರ ಪೈಕಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಮತದಾರರೇ ಇದ್ದಾರೆ. ದೊಡ್ಡಬಳ್ಳಾಪುರದಲ್ಲಿ 2,21,297 ಮತದಾರರಿದ್ದು, ಅದರಲ್ಲಿ 1,12,171 ಮಹಿಳಾ ಹಾಗೂ 1,09,125 ಪುರುಷ ಮತದಾರರಿದ್ದಾರೆ. ಹೊಸಕೋಟೆಯಲ್ಲಿ 2,40,998 ಮತದಾರರಲ್ಲಿ 1,21,543 ಮಹಿಳೆ ಹಾಗೂ 1,19,434 ಪುರುಷ ಮತದಾರರು ಇದ್ದಾರೆ. ದೇವನಹಳ್ಳಿಯಲಿ 2,18,343 ಮತದಾರರಿದ್ದು, 1,10,457 ಮಹಿಳಾ ಹಾಗೂ 1,07,869 ಪುರುಷ ಮತದಾರರಿದ್ದಾರೆ. ನೆಲಮಂಗಲದಲ್ಲಿ 2,25,086 ಮತದಾರರ ಪೈಕಿ 1,14,488 ಮಹಿಳೆ ಹಾಗೂ 1,10,490 ಪುರುಷ ಮತದಾರರಿದ್ದಾರೆ. ಮತದಾರರ ಲಿಂಗಾನುಪಾತದಲ್ಲಿ ಸಾವಿರ ಪುರುಷರಿಗೆ 1027 ಮಹಿಳೆಯರಿದ್ದಾರೆ. ಅದರಲ್ಲಿ ದೊಡ್ಡಬಳ್ಳಾಪುರದಲ್ಲಿ 1028, ಹೊಸಕೋಟೆಯಲ್ಲಿ 1018, ದೇವನಹಳ್ಳಿ 1024 ಹಾಗೂ ನೆಲಮಂಗಲದಲ್ಲಿ ಅತಿ ಹೆಚ್ಚು 1037 ಲಿಂಗಾನುಪಾತ ಕಂಡುಬಂದಿದೆ.
1141 ಮತಗಟ್ಟೆಗಳು: ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ 1141 ಮತಗಟ್ಟೆಗಳಿವೆ. ಹೊಸಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 293 ಮತಗಟ್ಟೆ, ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 294, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲಿ 276, ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲಿ278 ಮತಗಟ್ಟೆಗಳಿವೆ ಹಾಗೆಯೇ ಹೊಸಕೋಟೆ 3646, ದೇವನಹಳ್ಳಿ 3767 ಹಾಗೂ ದೊಡ್ಡಬಳ್ಳಾಪುರ 3399 ಹಾಗೂ ನೆಲಮಂಗಲದಲ್ಲಿ 2619 ಸೇರಿ 12,624 ಮಂದಿ ವಿಶೇಷಚೇತನ ಮತದಾರರಿದ್ದಾರೆ. ಜತೆಗೆ 85 ವರ್ಷ ಮೇಲ್ಪಟ್ಟ 11,114 ಹಿರಿಯ ನಾಗರಿಕ ಮತದಾರಿದ್ದಾರೆ. ಇನ್ನು ಸೇವಾ ಮತದಾರರು 128 ಮಂದಿ ಇದ್ದಾರೆ ಎಂದು ಮಾಹಿತಿ ನೀಡಿದರು.
ಸಹಭಾಗಿತ್ವ ಇರಲಿ : ಮತದಾರರ ಪಟ್ಟಿ ಪರಿಷ್ಕರಣೆ ಪ್ರತಿ ವರ್ಷ ನಿರಂತರವಾಗಿ ನಡೆಯುತ್ತಿರುತ್ತದೆ. 18 ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ಚುನಾವಣಾ ಪ್ರಕ್ರಿಯೆಯು ಆಡಳಿತ ಯಂತ್ರಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳ ಪಾತ್ರವು ಕೂಡ ಮುಖ್ಯವಾಗಿದ್ದು ಸಹಕಾರ ಹಾಗೂ ಸಹಭಾಗಿತ್ವ ಇರಲಿ ಎಂದು ರಾಜಕೀಯ ಪಕ್ಷಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿ ಮನವಿ ಮಾಡಿದರು.