

ಮಂಡ್ಯ: ಮತದಾರರು ಕರಡು ಮತಪಟ್ಟಿ ಪರಿಶೀಲಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ ಸಲಹೆ ನೀಡಿದರು.
ನಗರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಅಂಗವಾಗಿ ಆಯೋಜಿಸಿದ್ದ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಡಿಸಿ ಕಚೇರಿ ಎದುರು ಚಾಲನೆ ನೀಡಿ ಮಾತನಾಡಿದರು.
ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿಯಲ್ಲಿ ಪ್ರಕಟಿಸಿರುವ ಕರಡು ಪಟ್ಟಿಯನ್ನು ಗಮನಿಸಿ ಅದರಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಹೆಸರು ಬಿಟ್ಟು ಹೋಗಿದ್ದಲ್ಲಿ ಸೇರ್ಪಡೆ, ಮೊಬೈಲ್ ಸಂಖ್ಯೆ ಬದಲಾವಣೆ, ವಿಳಾಸ ಬದಲಾವಣೆ, ಹೊಸದಾಗಿ ಹೆಸರು ಸೇರ್ಪಡೆಗೆ ಒಂದು ತಿಂಗಳು ಕಾಲಾವಕಾಶವಿದ್ದು, ಈ ಸಂಬಂಧ ಬಿಎಲ್‌ಒಗಳಿಗೆ ನಿಗದಿತ ಅರ್ಜಿ ಸಲ್ಲಿಸಿ ಎಂದರು.
ಜಿಲ್ಲೆಯಲ್ಲಿ 14,77,951 ಮತದಾರರಿದ್ದಾರೆ. ಈ ಪೈಕಿ 7,35,082 ಪುರುಷ ಹಾಗೂ 7,42,869 ಮಹಿಳಾ ಮತದಾರರಿದ್ದಾರೆ. 2023 ಜ.1ರವರೆಗೆ ಅರ್ಹ ಮತದಾರರನ್ನು ಸೇರ್ಪಡೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ 17 ವರ್ಷ ತುಂಬಿರುವವರು ಸಹ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗಾಗಿ ಅರ್ಜಿ ಸಲ್ಲಿಸಬಹುದು. ವರ್ಷದಲ್ಲಿ 3 ಬಾರಿ ಪರಿಷ್ಕರಣೆ ನಡೆಯುತ್ತದೆ. ಅಂತಹ ಸಂದರ್ಭದಲ್ಲಿ ಅರ್ಜಿ ಪರಿಶೀಲಿಸಿ ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸಲಾಗುವುದು ಎಂದರು.
ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ ಮಾತನಾಡಿ, ಪ್ರತಿಮತವೂ ಅಮೂಲ್ಯ. ಯಾವುದೇ ಮತದಾರರು ಮತದಾನದ ಪ್ರಕ್ರಿಯೆಯಿಂದ ಹೊರಗೆ ಉಳಿಯಬಾರದೆಂದು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕಸ ಸಂಗ್ರಹಣೆಯ ಸ್ವಚ್ಛತಾ ವಾಹನಗಳ ಮೂಲಕ ಗ್ರಾಮ, ವಾರ್ಡ್‌ಗಳ ಮನೆ ಮನೆಗಳಿಗೂ ಮತದಾನದ ಮಹತ್ವದ ಮಾಹಿತಿಯನ್ನು ತಲುಪಿಸಲಾಗುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಮಂಡ್ಯ ಉಪವಿಭಾಗಾಧಿಕಾರಿ ಕೀರ್ತನಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾಗರಾಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ, ತಹಸೀಲ್ದಾರ್ ಕುಂಞ ಅಹಮದ್, ತಾಪಂ ಇಒ ವೇಣುಗೋಪಾಲ್ ಇತರರಿದ್ದರು.