

ಹುಬ್ಬಳ್ಳಿ: ಜಮ್ಮು-ಕಾಶ್ಮೀರ ಚುನಾವಣೆ ಮೇಲೆ ನಮಗೆ ವಿಶ್ವಾಸವಿತ್ತು ಹಾಗೂ ಹರಿಯಾಣದಲ್ಲಿ ನಾವೇ ಗೆಲ್ಲಬೇಕಾಗಿತ್ತು. ಆದರೆ, ಹರಿಯಾಣ ಚುನಾವಣೆ ನಮಗೆ ಪಾಠ ಕಲಿಸಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ವಿಶ್ಲೇಷಿಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಿಯಾಣದಲ್ಲಿ 50 ಕ್ಷೇತ್ರ ಗೆಲ್ಲುವ ವಿಶ್ವಾಸವಿತ್ತು. ಜಮ್ಮು-ಕಾಶ್ಮೀರದಲ್ಲೂ ಇಂಡಿ ಮೈತ್ರಿಕೂಟ ಗೆಲ್ಲುವ ವಿಶ್ವಾಸ ಇತ್ತು. ಆದರೆ, ನಮ್ಮ ಯೋಜನೆ ವಿರುದ್ಧವಾಗಿ ಅಲ್ಲಿನ ಮತದಾರರು ತೀರ್ಮಾನ ನೀಡಿದ್ದಾರೆ. ಜಮ್ಮು- ಕಾಶ್ಮೀರದ ಮತದಾರರು ಪ್ರಜಾಪ್ರಭುತ್ವ ಉಳಿಸಿದ್ದಾರೆ. ಹರಿಯಾಣ ಸೋಲು ನಮಗೆ ಪಾಠ ಕಲಿಸಿದೆ. ಈ ಸಮಬಂಧ ನಮ್ಮ ನಾಯಕರು ಮುಂದಿನ ದಿನಗಳಲ್ಲಿ ಚಿಂತನ ಮಂಥನ ಮಾಡಲಿದ್ದಾರೆ. ಜನ ನಮಗೆ ಎಚ್ಚರಿಕೆ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಚುನಾವಣೋತ್ತರ ಸಮೀಕ್ಷೆ ಬಗ್ಗೆ ನನ್ನದೇ ಆದ ಅನುಭವವಿದೆ. ನಾನೆಂದಿಗೂ ಸಮೀಕ್ಷೆ ನಂಬುವುದಿಲ್ಲ ಎಂದರು.
ಮುಖ್ಯಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಇದ್ದಾರಲ್ರೀ…’ ನಾವು ಅವರ ಕೈ ಕೆಳಗೆ ಕೆಲಸ ಮಾಡುವವರು. ಮುಂದೆಯೂ ಹಾಗೇ ಮಾಡುತ್ತೇವೆ. ಸತೀಶ ಜಾರಕಿಹೊಳಿ ದೆಹಲಿ ಭೇಟಿಯ ವಿಚಾರ ನನಗೆ ಗೊತ್ತಿಲ್ಲ. ಅದನ್ನು ಜಾರಕಿಹೊಳಿ ಅವರಿಗೇ ಕೇಳಬೇಕು ಎಂದ ಅವರು, ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಶೀಘ್ರವೇ ಪ್ರಕಟವಾಗಲಿದ್ದು, ಟಿಕೆಟ್ ಅಂತಿಗೊಳಿಸಲಾಗುವುದು ಎಂದರು.