

ಮಡಿಕೇರಿ: ಕೇಂದ್ರ ಸರ್ಕಾರವನ್ನು ವಿನಾಕಾರಣ ಟೀಕಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಜಾಹೀರಾತು ಅತ್ಯಂತ ಕೀಳುಮಟ್ಟದಿಂದ ಕೂಡಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದೇಶದ ಜನರೇ ಚೊಂಬು ನೀಡಲಿದ್ದಾರೆ ಎಂದು ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ತಿರುಗೇಟು ನೀಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜಕೀಯ ಯಾವಾಗಲೂ ಆರೋಗ್ಯಕರವಾಗಿರಬೇಕು. ಆದರೆ, ಸೋಲಿನ ಹತಾಶೆಯಲ್ಲಿರುವ ಕಾಂಗ್ರೆಸ್ ಅತ್ಯಂತ ಕ್ಷುಲ್ಲಕ ರಾಜಕಾರಣವನ್ನು ಪ್ರದರ್ಶಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ೬೦ ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಹಲವು ಹಗರಣಗಳ ಮೂಲಕ ಬೊಕ್ಕಸವನ್ನು ಬರಿದು ಮಾಡಿ ದೇಶದ ಜನರಿಗೆ ಖಾಲಿ ಚೊಂಬು ನೀಡಿತ್ತು. ಅದನ್ನು ತುಂಬಲು ಪ್ರಧಾನಮಂತ್ರಿ ನರೇಂದ್ರಮೋದಿ ಅವರೇ ಬರಬೇಕಾಯಿತು. ಈ ದೇಶದ ಜನರಿಗೆ ಕಾಂಗ್ರೆಸ್ ನೀಡಿದ ಖಾಲಿ ಚೊಂಬನ್ನು ಮೋದಿಯವರು ಭರ್ತಿ ಮಾಡಿದರು ಎಂದು ಖುದ್ದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರೇ ಬಹಿರಂಗ ಸಭೆಯಲ್ಲಿ ಹೇಳಿದ್ದಾರೆ. ಕಾಂಗ್ರೆಸ್ ಹಗರಣಗಳನ್ನು ಜನರೆದುರು ಬಿಚ್ಚಿಟ್ಟಿದ್ದಾರೆ. ಕಾಂಗ್ರೆಸ್ಸಿಗರು ಮೊದಲು ತಮ್ಮ ಹೆಗಲನ್ನು ತಾವು ನೋಡಿಕೊಳ್ಳಲಿ ಎಂದು ಸುಬ್ರಮಣ್ಯ ಉಪಾಧ್ಯಾಯ ತಿಳಿಸಿದ್ದಾರೆ.