

ಹುಬ್ಬಳ್ಳಿ : ಉಪ ಚುನಾವಣೆಯಲ್ಲಿ ಶಿಗ್ಗಾಂವಿ ಮತಕ್ಷೇತ್ರದ ಬಿಜೆಪಿ ಟಿಕೆಟ್ ಸಾಮಾನ್ಯ ಕಾರ್ಯಕರ್ತರಿಗೆ ಕೊಡುವ ನಿರೀಕ್ಷೆ ಇತ್ತಂತೆ. ಆದರೆ, ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರು ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಿದ್ದಕ್ಕೆ ಆ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರು ಆಕ್ರೋಶಗೊಂಡಿದ್ದಾರಂತೆ. ಹೀಗಾಗಿ, ಆ ಪಕ್ಷದ ಸೋಲು ಖಚಿತ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು.
ಶಿಗ್ಗಾಂವಿ ತೆರಳುವ ಮೊದಲು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬುಧವಾರದಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಉಪ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ. ಕಳೆದ ಲೋಕಸಭೆ ಚುನಾವಣೆಯಲ್ಲಿ ಆ ಕ್ಷೇತ್ರದಿಂದ ಕಾಂಗ್ರೆಸ್ಗೆ ಬಂದಿದ್ದ ಮತಗಳಿಗಿಂತ ಹೆಚ್ಚು ಮತಗಳು ಈ ಬಾರಿ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ಚನ್ನಪಟ್ಟಣ ಹಾಗೂ ಸಂಡೂರು ಕ್ಷೇತ್ರದಲ್ಲಿ ಒಂದು ಸುತ್ತು ಚುನಾವಣೆ ಪ್ರಚಾರ ನಡೆಸಿದ್ದು, ಈಗ ಪ್ರಚಾರಕ್ಕಾಗಿ ಶಿಗ್ಗಾಂವಿಗೆ ತೆರಳುತ್ತಿರುವುದಾಗಿ ಹೇಳಿದರು.
ಮುಖ್ಯಮಂತ್ರಿ ಅವರು ಲೋಕಾಯುಕ್ತ ಅಧಿಕಾರಿಗಳ ಮೇಲೆ ಗೌರವ ಇಟ್ಟು ವಿಚಾರಣೆಗೆ ಹೋಗಿಬಂದಿದ್ದಾರೆ. ಅಧಿಕಾರಿಗಳು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಧಿಕಾರದಲ್ಲಿದ್ದಾಗಲೇ ವಿಚಾರಣೆಗೆ ಹಾಜರಾಗುವ ಮುಖ್ಯಮಂತ್ರಿ ಸಿಕ್ಕಿದ್ದಕ್ಕಾಗಿ ಸಂತೋಷಪಡಬೇಕು ಎಂದರು.
ಲೋಕಾಯುಕ್ತದೊಂದಿಗೆ ಮುಖ್ಯಮಂತ್ರಿ ಅವರು ಮ್ಯಾಚ್ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂಬ ಪ್ರತಿಪಕ್ಷ ನಾಯಕ ಆರ್. ಅಶೋಕ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ, ಲೋಕಾಯುಕ್ತ ಸಾಂವಿಧಾನಿಕ ಸ್ಥಾನ. ಅದಕ್ಕೆ ಮ್ಯಾಚ್ಫಿಕ್ಸಿಂಗ್ ಹೊಂದಾಣಿಕೆ ಮಾಡುವ ಮೂಲಕ ಆರ್. ಅಶೋಕ ಅವರು ನ್ಯಾಯಾಲಯಕ್ಕೆ ಅವಮಾನ ಮಾಡಿದ್ದಾರೆ ಎಂದು ದೂರಿದರು.
ಲೋಕಾಯುಕ್ತ ಯಾರ ಕಾಲದಲ್ಲಿ ಆಗಿದ್ದು ಎಂಬುದು ಪ್ರತಿಪಕ್ಷ ನಾಯಕರಿಗೆ ಗೊತ್ತಾ ? ಎಂದು ಪ್ರಶ್ನಿಸಿದ ಶಿವಕುಮಾರ, ಪ್ರತಿಪಕ್ಷ ನಾಯಕನ ಸ್ಥಾನವು ಸಹ ಸಾಂವಿಧಾನಿಕವಾದದ್ದು. ಆ ಸ್ಥಾನದಲ್ಲಿ ಕುಳಿತು ಮತ್ತೊಂದು ಸಾಂವಿಧಾನಿಕ ಸ್ಥಾನದ ಮೇಲೆ ಆರೋಪ ಮಾಡಿರುವ ಆರ್. ಅಶೋಕ ಮೇಲೆ ಲೋಕಾಯುಕ್ತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.