

ಹುಣಸೂರು : ರಾಜಕಾರಣ ತನ್ನ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ತಪ್ಪು ದಾರಿಯಲ್ಲಿ ಸಾಗಲು ರಾಜಕಾರಣಿಗಳಷ್ಟೇ ಮತದಾರರೂ ಸಹ ಹೊಣೆಗಾರರೆಂದು ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಅಭಿಪ್ರಾಯಪಟ್ಟರು.
ನಗರದ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಶಾಲಾ ಮಂತ್ರಿಮಂಡಲದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಭಾರತಕ್ಕೆ ಪ್ರಜಾಪ್ರಭುತ್ವ ಆಡಳಿತ ಹೊಸದೇನೂ ಅಲ್ಲ. ಪುರಾತನ ಭಾರತದ ವೈಶಾಲಿ, ಲಿಚ್ಛವಿ, ಕುಶಾನ ಮುಂತಾದ ಗಣರಾಜ್ಯಗಳು ಪ್ರಜಾಪ್ರಭುತ್ವದ ರೂಪುರೇಷೆಗಳನ್ನು ಜಗತ್ತಿಗೆ ಪರಿಚಯಿಸಿದ್ದವು. ಗ್ರೀಕ್ ದೇಶದ ಅಥೆನ್ಸ್ ಹಾಗೂ ಸ್ಪಾರ್ಟಾಗಳಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದ್ದಂತೆ ಭಾರತದ ಗಣರಾಜ್ಯಗಳೂ ಪ್ರಜಾಪ್ರಭುತ್ವಕ್ಕೆ ಖ್ಯಾತವಾಗಿದ್ದವು ಎಂದರು.
ಆದರೆ ಜಾತೀಯತೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಚುನಾವಣಾ ಅಕ್ರಮ ಮುಂತಾದ ಕಲುಷಿತ ಮಾರ್ಗದಿಂದ ಆಧುನಿಕ ಪ್ರಜಾಪ್ರಭುತ್ವವು ಅರ್ಥ ಕಳೆದುಕೊಳ್ಳುತ್ತಿದೆ. ಇದಕ್ಕೆ ಮತದಾರರೂ ಪರೋಕ್ಷವಾಗಿ ಸಹಕರಿಸುತ್ತಾ ಪ್ರಜಾಸತ್ತಾತ್ಮಕ ಮೌಲ್ಯಗಳ ಅವಸಾನಕ್ಕೆ ಕಾರಣರಾಗುತ್ತಿದ್ದಾರೆ. ಅದೆಲ್ಲವನ್ನೂ ಸರಿದಾರಿಗೆ ತರುವ ಜವಾಬ್ದಾರಿ ಯುವಜನಾಂಗದ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಮೈಸೂರಿನ ಪೊಲೀಸ್ ಕಂಟ್ರೋಲ್ ರೂಂನ ಸಬ್ ಇನ್ಸ್‌ಪೆಕ್ಟರ್ ಮಹೇಶ್ ಮಾತನಾಡಿ, ಸೈಬರ್ ವಂಚನೆಗಳು ಅತಿಯಾಗಿ ನಡೆಯುತ್ತಿದ್ದು, ಬ್ಯಾಂಕ್ ವಂಚನೆ ಮುಂತಾದ ಸಾಮಾಜಿಕ ಅಪರಾಧಗಳನ್ನು ತಡೆಗಟ್ಟಲು ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ನೆರವು ನೀಡಬೇಕೆಂದರು.
ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಬಿಂದು ಎಲಿಜಬೆತ್ ವಹಿಸಿದ್ದರು. ಶಾಲಾ ಮಂತ್ರಿಮಂಡಲದ ಮುಖ್ಯಮಂತ್ರಿ, ಮಂತ್ರಿಗಳು, ಸದನದ ಸ್ಪೀಕರ್ ಮತ್ತು ವಿರೋಧ ಪಕ್ಷದ ನಾಯಕರಿಗೆ ಅಧಿಕಾರ ಮತ್ತು ಶಿಸ್ತಿನ ಪ್ರಮಾಣ ವಚನವನ್ನು ಬೋಧಿಸಿದರು. ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಅನಿತಾ ಡಿಸೋಜ, ಹುಣಸೂರಿನ ಸಂತ ಜೋಸೆಫರ ವಿದ್ಯಾಸಂಸ್ಥೆಗಳ ಸಂಚಾಲಕಿ ಸಿಸ್ಟರ್ ಡೈಸಿ ಡಿಕೋಸ್ತಾ ಇತರರು ಇದ್ದರು.