

ಮಂಡ್ಯ: ಜಿಲ್ಲೆಯಲ್ಲಿ ಅರ್ಹ ಯುವ ಮತದಾರರನ್ನು ಗುರುತಿಸುವುದರ ಜತೆಗೆ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಲು ಕಾರ್ಯಕ್ರಮ ರೂಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಪಿ.ಸಿ.ಜಾಫರ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮತದಾರರ ನೋಂದಣಿ ಕುರಿತು ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2024 ಜ.1ಕ್ಕೆ 18ವರ್ಷ ತುಂಬುವವರ ಹೆಸರನ್ನು ತಪ್ಪದೇ ಮತದಾರರ ಪಟ್ಟಿಗೆ ಸೇರಿಸಿ. 2011ರ ಜನಗಣತಿಯಂತೆ 5 ರಿಂದ 6 ವರ್ಷದ ಹೆಣ್ಣು ಹಾಗೂ ಗಂಡು ಮಕ್ಕಳ ಗಣತಿಯ ಪ್ರಕಾರ ಹೊಸದಾಗಿ ನೋಂದಣಿಯಾಗಿರುವವರನ್ನು ತಾಳೆ ಮಾಡಿಕೊಳ್ಳಿ ಎಂದರು.
ಪದವಿ ಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು, ಐ.ಟಿ.ಐ, ಡಿಪ್ಲೊಮಾ, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳಿಗೆ ಅಧಿಕಾರಿಗಳು ಖುದ್ದು ಭೇಟಿ ನೀಡಬೇಜಕು. ಮಾತ್ರವಲ್ಲದೆ ಅರ್ಹ ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಿ. ಕಾಲೇಜುಗಳಿಗೆ ಭೇಟಿ ನೀಡಿದಾಗ ಹೊರ ರಾಜ್ಯ ಅಥವಾ ಜಿಲ್ಲೆಯ ವಿದ್ಯಾರ್ಥಿಗಳು ಇದ್ದರೂ ಅವರು ಸಹ ಹೆಸರು ನೋಂದಣಿ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಮತದಾರರ ನೋಂದಣಿ ಕುರಿತಂತೆ ಈಗಾಗಲೇ ಎರಡು ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ. ಅದೇ ರೀತಿ ಡಿ.2 ಮತ್ತು 3 ರಂದು ವಿಶೇಷ ಶಿಬಿರ ನಡೆಯಲಿದೆ. ಇದನ್ನು ಸದುಪಯೋಗಪಡಿಸಿಕೊಂಡು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಬೇಕು. ಯುವ ಮತದಾರರಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 11,760 ಪುರುಷರು ಹಾಗೂ 9478 ಮಹಿಳಾ ಮತದಾರರು ಹೆಸರು ಸೇರ್ಪಡೆ ಮಾಡಿದ್ದಾರೆ. ಪ್ರಮುಖವಾಗಿ ಯುವ ಮಹಿಳಾ ಮತದಾರರ ಹೆಸರು ಸೇರ್ಪಡೆಗೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸೀಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಉಪವಿಭಾಗಾಧಿಕಾರಿಗಳಾದ ಶಿವಮೂರ್ತಿ, ನಂದೀಶ್, ಚುನಾವಣಾ ಶಾಖೆಯ ದೀಪಕ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.
ಇದೇ ಸಂದರ್ಭದಲ್ಲಿ ಸ್ವೀಪ್ ಸಮಿತಿ ವತಿಯಿಂದ ಮತದಾರರ ನೋಂದಣಿ ಜಾಗೃತಿ ಕುರಿತ ಪ್ರಚಾರದ ಪೋಸ್ಟರ್‌ಗಳನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಪಿ.ಸಿ.ಜಾಫರ್ ಬಿಡುಗಡೆ ಮಾಡಿದರು.