

ಬೆಂಗಳೂರು :ಪಾಲಿಕೆ ವ್ಯಾಪ್ತಿಯಲ್ಲಿ 18 ವರ್ಷ ತುಂಬಿದ ಯಾರೊಬ್ಬರೂ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಹೆಸರು ನೋಂದಣಿ ಮಾಡಿಸುವಂತೆ ಘನತ್ಯಾಜ್ಯ ವಿಲೇವಾರಿ ಆಟೋಗಳ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದು ಮತದಾರರ ಪಟ್ಟಿ ವೀಕ್ಷಕ ಜಿ. ಕುಮಾರ್ ನಾಯಕ್ ತಿಳಿಸಿದ್ದಾರೆ.
ಬೆಂಗಳೂರು-ಬಿಬಿಎಂಪಿ ಕೇಂದ್ರ ವ್ಯಾಪ್ತಿಯ ರಾಜರಾಜೇಶ್ವರಿನಗರ, ಶಿವಾಜಿನಗರ, ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2021ರ ನಡೆದ ಸಭೆಯಲ್ಲಿ ಮಾತನಾಡಿದರು. ಕೇಂದ್ರ ವಿಭಾಗದ ಎಲ್ಲ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿದ ಎಲ್ಲರನ್ನು ಗುರುತಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು. ಈ ನಿಟ್ಟಿನಲ್ಲಿ ಜನರು ಕಚೇರಿಗಳಿಗೆ ತೆರಳುವ ಮುಂಚಿತವಾಗಿ ಬೆಳಗ್ಗೆ ತ್ಯಾಜ್ಯ ಸಂಗ್ರಹಿಸುವ ಆಟೋಗಳ ಮೂಲಕ ಅರಿವು ಮೂಡಿಸಬೇಕು ಎಂದು ಸೂಚಿಸಿದರು.
ಪಾಲಿಕೆ ಅಪರ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಪಾಲಿಕೆ ಆಡಳಿತ ವಿಭಾಗದ ವಿಶೇಷ ಆಯುಕ್ತ ಜೆ. ಮಂಜುನಾಥ್ ಮಾತನಾಡಿ, ಮತದಾರರ ಪಟ್ಟಿ ಹಾಗೂ ಎಲೆಕ್ಟರ್ಸ್ ಪಾಪುಲೇಷನ್ ರೇಷಿಯೋ ಹೆಚ್ಚಳಕ್ಕೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ 4 ಭಾನುವಾರ ಮತದಾರರ ನೋಂದಣಿಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮನೆ ಮನೆಗೆ ತೆರಳಿ ಪರಿಷ್ಕರಣೆ ಮಾಡಲಾಗುತ್ತಿದೆ. ಈ ವೇಳೆ 2020 ಜನರಿಗೆ 18 ವರ್ಷ ತುಂಬಿದ ಎಲ್ಲ ಯುವಕ/ ಯುವತಿಯರಿಗೆ ನಮೂನೆ-6 ಭರ್ತಿ ಮಾಡಿಸಿ ಭಾವಚಿತ್ರ, ಶಾಲೆಯ ಟಿಸಿ, ಅಂಕಪಟ್ಟಿ, ಅಧಾರ್ ಕಾರ್ಡ್ ನಕಲು ನೀಡಿ ಮತದಾರರ ಪಟ್ಟಿಗೆ ಹೆಸರು ಸೇರೊಸಲು ಅವಕಾಶ ನೀಡಲಾಗುತ್ತಿದೆ ಎಂದರು.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕ್ಷೇಮಾಭಿವೃದ್ಧಿ ಸಂಘಗಳು ಮತ್ತು ಎನ್‌ಜಿಒಗಳ ಸಹಯೋಗದೊಂದಿಗೆ ಕೆಲಸ ಜಾಗೃತಿ ಮೂಡಿಸಲಾಗುತ್ತಿದೆ. ಮನೆಗಳು, ಅಪಾರ್ಟ್‌ಮೆಂಟ್, ಪಿ.ಜಿ.(ಪೇಯಿಂಗ್ ಗೆಸ್ಟ್)ಗಳಿಗೆ ಭೇಟಿ ನೀಡಿ 18 ವರ್ಷ ತುಂಬಿದವರಿಗೆ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಎಂದು ಜೆ. ಮಂಜುನಾಥ್ ಮಾಹಿತಿ ನೀಡಿದರು.