ಪದವೀಧರ ಮತದಾರರ ಪಟ್ಟಿಗೆ ಹೆಸರು ನೋಂದಣಿ ಆರಂಭ

25-HNL-3 S Renuka
Published on

ಹಾನಗಲ್ಲ: ಆರು ವರ್ಷಗಳಿಗೊಮ್ಮೆ ನಡೆಯುವ ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆಯ ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ಅರ್ಹರು ಅಗತ್ಯ ದಾಖಲೆಗಳೊಂದಿಗೆ ನವೆಂಬರ್ 6 ರೊಳಗಾಗಿ ನೋಂದಾಯಿಸಿಕೊಳ್ಳಬೇಕು ಎಂದು ಸಹಾಯಕ ಮತದಾರ ನೋಂದಣಾಧಿಕಾರಿ, ತಹಸೀಲ್ದಾರ್ ಎಸ್. ರೇಣುಕಾ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದ ಅವರು, ಪದವೀಧರ ಮತಕ್ಷೇತ್ರದ ಪ್ರತಿ ಚುನಾವಣೆಗೂ ಹೆಸರು ಮರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಧಾರವಾಡ, ಉತ್ತರ ಕನ್ನಡ, ಹಾವೇರಿ ಜಿಲ್ಲೆಗಳನ್ನೊಳಗೊಂಡ ಚುನಾವಣೆ 2026ರಲ್ಲಿ ಜರುಗಲಿದೆ. ತಾಲೂಕಿನಲ್ಲಿ ಕಳೆದ ಬಾರಿ 3128 ಪದವೀಧರರು ಹೆಸರು ನೋಂದಾಯಿಸಿಕೊಂಡಿದ್ದರು ಎಂದು ತಿಳಿಸಿದರು.

ಪದವೀಧರರು ನಮೂನೆ 18ರಲ್ಲಿ ಸ್ವ-ವಿವರಗಳೊಂದಿಗೆ ತಮ್ಮ ಪದವಿ ದಾಖಲೆಗಳನ್ನು ನೋಟರಿ ಅಥವಾ ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿರಬೇಕು. ಪದವೀಧರ ನೌಕರರು ತಮ್ಮ ಇಲಾಖೆಯ ಮುಖ್ಯಸ್ಥರಿಂದ ದೃಢೀಕರಿಸಿರಬೇಕು. ನವೆಂಬರ್ 1ಕ್ಕೆ ಮೂರು ವರ್ಷಗಳ ಮುಂಚಿತವಾಗಿ ಪದವಿ ವ್ಯಾಸಂಗ ಪೂರ್ಣಗೊಂಡಿರುವವರು ಹೆಸರು ನೋಂದಣಿಗೆ ಅರ್ಹರಾಗಿರುತ್ತಾರೆ. ಪದವಿ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಅರ್ಹ. ಇದುವರೆಗೆ 952 ಅರ್ಜಿ ವಿತರಿಸಲಾಗಿದೆ. ಇವುಗಳಲ್ಲಿ 78 ಅರ್ಜಿಗಳನ್ನು ಮಾತ್ರ ಮರಳಿ ಬಂದಿವೆ. ಪದವೀಧರ ಮತದಾರರು ಕೊನೆಯ ದಿನದವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ ಹೆಸರು ನೋಂದಾಯಿಸಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net