

ತುಮಕೂರು: ಮತಕಳ್ಳತನ ಗಂಭೀರ ಆರೋಪ ಮಾಡಿದ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗಕ್ಕೆ ದೂರು ಕೊಡದೆ ಹೋಗಿದ್ದಾರೆಂಬುದನ್ನೇ ಬಿಜೆಪಿಯವರು ದೊಡ್ಡ ವಿಷಯವನ್ನಾಗಿ ಮಾಡಲು ಹೊರಟಿರುವುದು ವಿಪರ್ಯಾಸ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಹೇಳಿದರೆ, ಮತದಾರರ ಪಟ್ಟಿ ನಮ್ಮ ಸರ್ಕಾರ ಇದ್ದಾಗಲೇ ಮಾಡಿರುವುದು. ಆಗ ಎಲ್ಲರೂ ಕಣ್ಮುಚ್ಚಿ ಕುಳಿತಿದ್ದರಾ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಪ್ರಶ್ನಿಸಿರುವುದು ಹೊಸ ವಿವಾದವನ್ನು ಹುಟ್ಟುಹಾಕಿದೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಕೊಡುವುದಿಕ್ಕೆ ಏನು ತೊಂದರೆ ಇರಲಿಲ್ಲ. ಇಲ್ಲಿ ದೂರು ಕೊಟ್ಟರೆ ಕೇಂದ್ರ ಚುನಾವಣೆ ಆಯೋಗಕ್ಕೆ ಕಳುಹಿಸಿಕೊಡುತ್ತಾರೆ. ಹಾಗಾಗಿ, ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ನೀವು ಇಲ್ಲಿ ಕೊಡಿ ನಾನು ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ಕೊಡುತ್ತೀನಿ ಹೇಳಿದ್ದಾರೆ. ಅದರಲ್ಲಿ ಇನ್ನೇನು ವಿಶೇಷ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಚುನಾವಣಾ ಆಯೋಗದವರು ದಾಖಲೆಗಳನ್ನು ಕೊಡುವಂತೆ ಹೇಳಿದ್ದು ಅದರಂತೆ ಅಫಿಡವಿಟ್, ದಾಖಲೆಗಳನ್ನು ಒದಗಿಸಲಾಗುತ್ತದೆ. ಚುನಾವಣಾ ಆಯೋಗಕ್ಕೆ ದೂರು ಕೊಡಲಿರುವ ಪ್ರಕ್ರಿಯೆಯನ್ನು ಅನುಸರಿಸಲಾಗುವುದು. ಪ್ರತಿ ರಾಜ್ಯದಲ್ಲು ಅಫಿಡವಿಟ್ ಕೊಡಬೇಕು ಅನ್ನುವುದು ನನಗೆ ಗೊತ್ತಿರಲಿಲ್ಲ. ರಾಹುಲ್ ಗಾಂಧಿಯವರೇ ಕೊಡಬೇಕು ಅಂತ ಏನಿದೆ? ಕೆಪಿಸಿಸಿ ಅಧ್ಯಕ್ಷರು ಜವಾಬ್ದಾರಿ ಸ್ಥಾನದಲ್ಲಿರುವರು ಅವರು ಕೊಡುತ್ತಾರೆ. ಬಿಹಾರ ಒಂದೇ ಅಲ್ಲ, ಮುಂದಿನ ವರ್ಷದಲ್ಲಿ 5&6 ರಾಜ್ಯಗಳ ಚುನಾವಣೆ ಬರಲಿದೆ. ಮುಂದೆ ಲೋಕಸಭಾ ಚುನಾವಣೆಯು ಬರಲಿದೆ. ಮತದಾರರ ಪಟ್ಟಿಯಲ್ಲಿ ಈ ರೀತಿ ಹಸ್ತಕ್ಷೇಪ ನಡೆಸಿರುವುದಕ್ಕೆ ಕಡಿವಾಣ ಹಾಕಬೇಕಿದೆ. ಈಗಿನಿಂದಲೇ ಎಚ್ಚರಿಕೆವಹಿಸಬೇಕಲ್ಲವಾ ಎಂದರು.
ವೋಟರ್ ಲಿಸ್ಟ್ ಮಾಡಿದ್ದು ನಮ್ಮ ಸರ್ಕಾರ ಇದ್ದಾಗ !
ಲೋಕಸಭಾ ಚುನಾವಣೆಗೆ ವೋಟರ್ ಲಿಸ್ಟ್ ಮಾಡಿದ್ದ ನಮ್ಮ ಸರ್ಕಾರ ಇರುವಾಗಲೇ. ಆಗ ಎಲ್ಲಾ ಕಣ್ಮುಚ್ಚಿ ಕುಳಿತಿದ್ದರಾ? ಸುಮ್ಮನೇ ಮಾತನಾಡಲಿಕ್ಕೆ ಹೋದರೆ ಎಲ್ಲೆಲ್ಲೋ ಹೋಗುತ್ತೆ. ಈ ಅಕ್ರಮಗಳು ನಡೆದಿರುವುದು ಸತ್ಯ. ಇದರಲ್ಲಿ ಯಾವುದೇ ಸುಳ್ಳಿಲ್ಲ. ಅಕ್ರಮಗಳು ನಮ್ಮ ಕಣ್ಮುಂದೆನೆ ನಡೆದಿದ್ದವಲ್ಲಾ ನಮಗೆ ಅವಮಾನ ಆಗಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಮಹದೇವಪುರದಲ್ಲಿ ಮೋಸ ನಡೆದಿರುವುದು ನಿಜ. ಒಬ್ಬನೇ ಮೂರು ಕಡೆ ವೋಟರ್ ಲಿಸ್ಟ್ ನಲ್ಲಿರುವುದು ಸತ್ಯ. ಚುನಾವಣಾ ಅಕ್ರಮಗಳು ಸಾಕಷ್ಟು ನಡೆದಿವೆ. ಆದರೆ, ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಕೊಟ್ಟಾಗ ನಾವು ಆಕ್ಷೇಪಣೆ ಸಲ್ಲಿಸಬೇಕಿತ್ತು. ಆಗ ಜವಾಬ್ದಾರಿ ಇರುತ್ತಿತ್ತು. ಅಂದು ನಾವು ಸುಮ್ಮನಿದ್ದು ಈಗ ಮತಕಳ್ಳತನ ಬಗ್ಗೆ ಮಾತನಾಡುತ್ತಿರುವುದರಲ್ಲಿ ಅರ್ಥವಿಲ್ಲ. ಇನ್ಮುಂದೆ ಎಚ್ಚರಿಕೆಯಿಂದ ಇರಬೇಕು. ರಾಹುಲ ಗಾಂಧಿ ನೇತೃತ್ವದಲ್ಲಿ ಮುಂದೆ ನಾವು ಎಚ್ಚರಿಕೆಯಿಂದ ಅವರ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತೇವೆ ಎಂದರು.