

ಮೈಸೂರು: ಲೋಕಸಭಾ ಚುನಾವಣೆ, ಮತದಾರರ ಪಟ್ಟಿಯ ಕುರಿತು ಕ್ಷಣಾರ್ಧದಲ್ಲಿ ಮಾಹಿತಿ ಪಡೆದುಕೊಳ್ಳಬೇಕೇ? ಹಾಗಾದರೆ, ಒಮ್ಮೆ ‘ವೋಟರ್ ಹೆಲ್ಪ್‌ಲೈನ್ ಆ್ಯಪ್’ (ವಿಎಚ್‌ಎ)ಗೆ ಭೇಟಿ ನೀಡಿ. ಅಂಗೈಯಲ್ಲೇ ಚುನಾವಣೆ ಮಾಹಿತಿ ದೊರೆಯಲಿದ್ದು, ಇದು ಇಡೀ ಚುನಾವಣಾ ಪ್ರಕ್ರಿಯೆಯ ಮಾಹಿತಿ ಕಣಜವಾಗಿದೆ.
ಪ್ರತಿಯೊಬ್ಬರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದು ಸೇರಿದಂತೆ ವಿವಿಧ ಮಾಹಿತಿಯನ್ನು ಇಲ್ಲಿಂದ ಸುಲಭವಾಗಿ ಪಡೆದುಕೊಳ್ಳಬಹುದು. ಅದಕ್ಕಾಗಿ ಗೂಗಲ್ ಪ್ಲೇಸ್ಟೋರ್ ಮೂಲಕ ಈ ಆ್ಯಪ್ ಅನ್ನು ಮೊಬೈಲ್‌ಗೆ ಡೌನ್‌ಲೋಡ್ ಮಾಡಿಕೊಂಡು ಪರಿಶೀಲನೆ ಮಾಡಿದರೆ ಸಾಕು. ಈ ಆ್ಯಪ್ ಮೂಲಕ ಹೊಸ ಮತದಾರರ ನೋಂದಣಿ, ಹೆಸರು ತಿದ್ದುಪಡಿ, ಮರಣ ಹೊಂದಿದ್ದರೆ ರದ್ದುಪಡಿಸುವುದು, ಯಾವ ಮತಗಟ್ಟೆಯಲ್ಲಿ ನೋಂದಣಿಯಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.
ಇವಿಎಂ, ವಿವಿ ಪ್ಯಾಟ್‌ಗಳು, ಚುನಾವಣಾ ಅಭ್ಯರ್ಥಿಗಳು ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ವಿವಿಧ ಮಾಹಿತಿಯನ್ನು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ ಇದೆ. 12 ಪ್ರಾದೇಶಿಕ ಭಾಷೆಗಳಲ್ಲಿ ಈ ಸೇವೆ ದೊರೆಯುತ್ತಿದೆ.
ಆ್ಯಪ್ ಅನ್ನು ತೆರೆಯುತ್ತಿದ್ದಂತೆ ಹೊಸದಾಗಿ ಲಾಗ್ ಇನ್ ಆಗಬೇಕು. ಮೊದಲ ಬಾರಿ ಲಾಗ್‌ಇನ್ ಆಗುವಾಗ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಬರಲಿದೆ. ನಂತರ ಪಾಸ್‌ವರ್ಡ್ ಸೆಟ್ ಮಾಡಿಕೊಂಡ ಮೇಲೆ ಆ್ಯಪ್ ತೆರೆದುಕೊಳ್ಳಲಿದ್ದು,
ಮತದಾರರ ಸಹಾಯವಾಣಿ ಆ್ಯಪ್‌ನಲ್ಲಿ (ವಿಎಚ್‌ಎ) 9 ವಿಭಾಗಗಳಿವೆ.
ಹೊಸ ಮತದಾರರ ನೋಂದಣಿಗೆ ನಮೂನೆ-6 ಅರ್ಜಿ, ಅನಿವಾಸಿ ಭಾರತೀಯರು ಅವರ ಹೆಸರನ್ನು ನೋಂದಾಯಿಸಿಕೊಳ್ಳಲು ನಮೂನೆ-6ಎ, ಆಧಾರ್ ಸಂಖ್ಯೆಯನ್ನು ಸಲ್ಲಿಸಲು ಫಾರ್ಮ್ 6 ಬಿ, ರದ್ದುಪಡಿಸಲು (ಮರಣ, ಸ್ಥಳಾಂತರ, ಪುನರಾವರ್ತನೆ)ನಮೂನೆ-7, ಮತದಾರರ ಚೀಟಿಯಲ್ಲಿ ತಿದ್ದುಪಡಿಗಳಿದ್ದರೆ, ಎಲೆಕ್ಷನ್ ಕಾರ್ಡ್(ಎಪಿಕ್ ಕಾರ್ಡ್) ಬದಲಾವಣೆ, ವಲಸೆ ಬಂದಿದ್ದರೆ ಹಾಗೂ ಇತರ ತಿದ್ದುಪಡಿಗಳಿಗೆ ಫಾರ್ಮ್-8 ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.
ಮತದಾರರ ಲಭ್ಯವಿರುವ ಸೇವೆಗಳ ವಿಭಾಗದಲ್ಲಿ ಮತಗಟ್ಟೆ ವಿವರ, ಜಿಲ್ಲಾ ಚುನಾವಣಾಧಿಕಾರಿ (ಡಿಇಒ), ಚುನಾವಣಾ ನೋಂದಣಾಧಿಕಾರಿ (ಇಆರ್‌ಒ) ಹಾಗೂ ಮತಗಟ್ಟೆ ಅಧಿಕಾರಿ (ಬಿಎಲ್‌ಒ) ಮಾಹಿತಿ ಹಾಗೂ ಫೋನ್ ಸಂಖ್ಯೆ ಸಹ ದೊರೆಯಲಿದೆ. ಮತಗಟ್ಟೆಯ ಗೂಗಲ್ ಲೊಕೇಶನ್ ಸಹ ಮಾಹಿತಿ ಸುಲಭವಾಗಿ ದೊರೆಯಲಿದೆ.
ಇ-ಎಪಿಕ್ ಕಾರ್ಡ್ ಅನ್ನು ಈ ಆ್ಯಪ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಎಪಿಕ್ ಸಂಖ್ಯೆಯನ್ನು ಹಾಕಿ, ವಾಸಿಸುವ ರಾಜ್ಯವನ್ನು ಆಯ್ಕೆ ಮಾಡಿದರೆ ಬರುವ ಒಟಿಪಿಯನ್ನು ನಮೂದು ಮಾಡಬೇಕು. ನಂತರ ಇಎಪಿಕ್ ಕಾರ್ಡ್‌ನ ಪಿಡಿಎಫ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಇಟ್ಟುಕೊಳ್ಳಬಹುದು.
ಮತದಾನ ಪಟ್ಟಿಯೊಂದಿಗೆ ಚುನಾವಣೆಯ ಫಲಿತಾಂಶ ವಿಭಾಗದಲ್ಲಿ ಪಕ್ಷ, ಅಭ್ಯರ್ಥಿ ಗಳಿಸಿದ ಮತಗಳು, ಮುನ್ನಡೆ ಮೊದಲಾದ ಅಂಶಗಳ ಕುರಿತು ಮಾಹಿತಿಯನ್ನು ಅಂಗೈಯಲ್ಲೇ ಪಡೆದುಕೊಳ್ಳಬೇಕು. ಜತೆಗೆ ಜ್ಞಾನಾಧಾರಿತ ವಿಭಾಗದಲ್ಲಿ ಚುನಾವಣಾ ಆಯೋಗ, ಇವಿಎಂ, ವಿವಿ ಪ್ಯಾಟ್, ಚುನಾವಣಾ ಫಲಿತಾಂಶ ಹಾಗೂ ಅಂಕಿ-ಅಂಶ, ಆಯೋಗದ ಪ್ರಕಟಣೆಗಳು, ಸೂಚನೆಗಳ ಮಾಹಿತಿ ಇದೆ.
ಹೊಸ ಬೆಳವಣಿಗೆಗಳ ವಿಭಾಗದಲ್ಲಿ ಆಯೋಗದ ಪತ್ರಿಕಾ ಪ್ರಕಟಣೆಗಳು, ಸೂಚನೆಗಳು ಹಾಗೂ ಆ್ಯಪ್‌ಗಳ ಮಾಹಿತಿ ಇರುತ್ತದೆ. ಆ್ಯಪ್‌ಗಳಾದ ಕೆವೈಸಿ ಇಸಿಐ, ಸುವಿಧಾ, ಎನ್‌ಕೊರ್ ನೋಡಲ್ ಆ್ಯಪ್, ವೋಟರ್ ಟರ್ನೌಟ್, ಸಿ-ವಿಜಿಲ್, ಸಾಕ್ಷಾಂ- ಇಸಿಐ, ವೀಕ್ಷಕರು(ಅಬ್ಸರ್ವರ್), ಇ-ಎಸ್‌ಎಂಎಸ್ ಮಾಹಿತಿ ಸಹ ಲಭ್ಯ ಇದೆ. ಇವುಗಳ ವೆಬ್ ಅಪ್ಲಿಕೇಶನ್‌ಗಳೂ ದೊರೆಯಲಿದೆ. ಇದರೊಂದಿಗೆ ದೂರುಗಳು ಹಾಗೂ ಸಲಹೆಗಳ ವಿಭಾಗ ಸಹ ಇದರಲ್ಲಿ ಇದೆ.
ಎಲ್ಲ ಚುನಾವಣೆಗಳ ಮಾಹಿತಿಯೂ ದೊರೆಯಲಿದೆ. ಲೋಕಸಭೆ, ವಿಧಾನಸಭೆ ಚುನಾವಣೆಗಳು, ಉಪ ಚುನಾವಣೆಗಳ ಫಲಿತಾಂಶ, ಚುನಾವಣೆ ಆಯೋಜನೆ ಅವಧಿ ಸೇರಿದಂತೆ ಎಲ್ಲ ಮಾಹಿತಿಗೆ ಪೂರಕವಾದ ದಾಖಲೆಗಳು ಇಲ್ಲಿ ದೊರೆಯಲಿದೆ. ಅಲ್ಲದೇ, 2024ರ ಸಾರ್ವತ್ರಿಕ ಲೋಕಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಮಾಹಿತಿ, ಅವರು ಸಲ್ಲಿಸಿರುವ ಅಫಿಡವಿಟ್ ಅನ್ನೂ ಸಾರ್ವಜನಿಕರು ಈ ಆ್ಯಪ್ ಮೂಲಕ ನೋಡಬಹುದು. ಸ್ವೀಕೃತಗೊಂಡ ಹಾಗೂ ತಿರಸ್ಕೃತವಾದ ನಾಮಪತ್ರಗಳು ವಾಪಸ್ ಪಡೆದವರು ಹಾಗೂ ಅಂತಿಮ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ವಿವರಗಳು ಲಭ್ಯ ಇದೆ.