ಮತದಾನ ಹಕ್ಕಷ್ಟೇ ಅಲ್ಲ ಜವಾಬ್ದಾರಿ: ಪ್ರತಿಕ್​ ಬಾಯಲ್

UDP-5-4-Jaaghruthi
Published on

ಉಡುಪಿ: ಮತದಾನ ಎನ್ನುವುದು ಹಕ್ಕು ಮಾತ್ರವಷ್ಟೇ ಅಲ್ಲ. ಅದು ಎಲ್ಲ ಮತದಾರರ ಜವಾಬ್ದಾರಿಯೂ ಹೌದು. ಮತದಾನ ದಿನ ಸಾರ್ವತ್ರಿಕ ರಜೆ ನೀಡುವುದು ಮೋಜು, ಮಸ್ತಿ ಮಾಡಲೆಂದಲ್ಲ. ಮತದಾನದ ದಿನ ಅರ್ಹರೆಲ್ಲರೂ ತಮ್ಮ ಹಕ್ಕು ಚಲಾಯಿಸುವ ಮೂಲಕ ರಜೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್​ ಸಮಿತಿ ಅಧ್ಯಕ್ಷ ಪ್ರತಿಕ್​ ಬಾಯಲ್​ ಕರೆ ನೀಡಿದರು.

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಮತದಾರರಿಗೆ ಜಾಗೃತಿ ಮತ್ತು ನಾಗರಿಕರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಾಗಲು, ಅದಕ್ಕೆ ಉತ್ತೇಜಿಸಲು ಇಂತಹ ಕಾರ್ಯಕ್ರಮವನ್ನು ಜಿಲ್ಲಾದ್ಯಂತ ಆಯೋಜಿಸಲಾಗುತ್ತಿದೆ. ಎಲ್ಲ ಮತದಾರರೂ ಮತದಾನ ಮಾಡುವುದಲ್ಲದೆ, ತಮ್ಮ ಸಂಬಂಧಿಕರು, ಪರಿಚಿತ ಮತದಾರರಿಗೂ ಹಕ್ಕು ಚಲಾಯಿಸಲು ಜಾಗೃತಿ ಮೂಡಿಸಬೇಕು ಎಂದರು.

ಉತ್ತಮ ಕಾರ್ಯ:
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕ ಡಾ.ಅವಿನಾಶ್​ ಶೆಟ್ಟಿ ಮಾತನಾಡಿ, ಮತದಾರರಲ್ಲಿ ಹಕ್ಕು ಚಲಾಯಿಸುವಂತೆ ಪ್ರೇರೇಪಿಸಲು ೂರ್ವಭಾವಿಯಾಗಿ ಜಿಲ್ಲಾಡಳಿತ ಇಂತಹ ಜಾಗೃತಿ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಕಾರ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಇಂತಹ ಉಪಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ಯಕ್ಷಗಾನ ಪ್ರದರ್ಶನ:
ಬಳಿಕ ಮತದಾನದ ಕುರಿತು ಜಾಗೃತಿ ಮೂಡಿಸಲು ಯಕ್ಷಗಾನ ಪ್ರದರ್ಶನ ನಡೆಯಿತು. ಮಣಿಪಾಲದ ಆಸರೆ ವಿಶೇಷ ಶಾಲೆಯ ವಿದ್ಯಾರ್ಥಿಗಳು ಚುನಾವಣಾ ಜಾಗೃತಿ ಭಿತ್ತಿಪತ್ರ ಪ್ರದರ್ಶಿಸಿ ಗಮನ ಸೆಳೆದರು. ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಯೋಜನಾ ಅಧಿಕಾರಿ ಶಿವಾಜಿ, ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆ ಹಾಗೂ ಮತದಾನದ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.

ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ರತ್ನಾ ಸುವರ್ಣ, ಸ್ವೀಪ್​ ಸಮಿತಿಯ ಅನುರಾಧಾ ಇನ್ನಿತರರು ಇದ್ದರು. ಕಸ್ತೂರ್ಬಾ ಆಸ್ಪತ್ರೆಯ ಮಾರ್ಕೆಟಿಂಗ್​ ಮ್ಯಾನೇಜರ್​ ಮೋಹನ್​ ಶೆಟ್ಟಿ ಸ್ವಾಗತಿಸಿದರು. ಆಸರೆ ಅಧ್ಯಕ್ಷ ಜೈವಿಠ್ಠಲ್​ ವಂದಿಸಿದರು, ಶಿಕ್ಷಕ ರಮೇಶ್​ ನಾಯಕ್​ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net