ಬಲಿಷ್ಠ ದೇಶ ನಿರ್ಮಾಣಕ್ಕೆ ಸಹಕರಿಸಿ

8 CRP Election aware
Published on

ಚನ್ನರಾಯಪಟ್ಟಣ : ಮತದಾನ ಮಾಡುವ ಮೂಲಕ ಬಲಿಷ್ಠ ದೇಶ ನಿರ್ಮಾಣಕ್ಕೆ ಸಹಕರಿಸಿ ಎಂದು ತಾಪಂ ಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಜಿ.ಆರ್. ಹರೀಶ್ ಹೇಳಿದರು. ಪಟ್ಟಣದ ಆದಿಚುಂಚುನಗಿರಿ ಪ್ರಥಮದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗ, ತಾಪಂ ಮತ್ತು ಚುನಾವಣಾ ಸಾಕ್ಷರತಾ ಕ್ಲಬ್ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಮತದಾನದ ಜಾಗೃತಿ ಅವಶ್ಯಕವಾಗಿದೆ. ವಿದ್ಯಾರ್ಥಿ ಹಂತದಿಂದಲೇ ಮತದಾನದ ಬಗ್ಗೆ ಅರಿವು ಮೂಡಿಸಿದಾಗ ಬಲಿಷ್ಠ ದೇಶ ಕಟ್ಟಲು ಸಾಧ್ಯ ಎಂದರು.
ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಉತ್ತಮ ಪ್ರತಿನಿಧಿಯನ್ನು ಆಯ್ಕೆಮಾಡುವ ಹೊಣೆಗಾರಿಕೆ ಮತದಾರರಿಗೆ ಇದೆ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು. ತಾಲೂಕಿನಲ್ಲಿ ಇನ್ನೂ 2,264 ಯುವ ಮತದಾರರ ಹೆಸರು ನೋಂದಣಿ ಮಾಡಿಕೊಳ್ಳುವುದು ಬಾಕಿ ಇದೆ. ದೇಶದ ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಪ್ರಗತಿ ಹೊಂದಬೇಕಾದರೆ ಎಲ್ಲರೂ ಮತದಾನದ ಪ್ರಕ್ರಿಯೆಲ್ಲಿ ಪಾಲ್ಗೊಳ್ಳಬೇಕು ಎಂದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ನಾಗರಾಜ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯುನ್ಮಾನ ಮತಯಂತ್ರದ ಪ್ರಾತ್ಯಕ್ಷಿಕೆ ನೀಡಲಾಯಿತು. ವಿದ್ಯುನ್ಮಾನ ಮತ ಯಂತ್ರದಲ್ಲಿ ಮತದಾನ ಮಾಡುವ ಮೂಲಕ ಮತದಾನದ ವಿಧಾನದ ಬಗ್ಗೆ ತಿಳಿದುಕೊಂಡರು. ವಿವಿಪ್ಯಾಟ್ ನಿಂದ ಮತದಾನ ಖಾತ್ರಿ ಕುರಿತು ಮತ್ತು ನೋಟಾ( ಮೇಲ್ಕಕಂಡವರು ಯಾರೂಅಲ್ಲ) ವಿಧಾನವನ್ನು ತಿಳಿದುಕೊಂಡರು.
ನಂತರ ಕಾಲೇಜಿನ ಯುವಮತದಾರರನ್ನು ವೋಟರ್ ಹೆಲ್ಡ್ ಲೈನ್ ಆ್ಯಪ್ ಮೂಲಕ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಲಾಯಿತು. ಪ್ರಾಂಶುಪಾಲ ಎಂ.ಕೆ. ಮಂಜುನಾಥ, ತಾಪಂ ಸಹಾಯಕ ನಿರ್ದೇಶಕ ಗಿರೀಶ್, ಸಹಾಯಕ ಪ್ರಾಧ್ಯಾಪಕ ಸಿದ್ದರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net