

ಎನ್.ಆರ್.ಪುರ: ಮತದನಾನ ನಮ್ಮೆಲ್ಲರ ಹಕ್ಕು ಹಾಗೂ ಕರ್ತವ್ಯವಾಗಿದ್ದು, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಸಿವಿಲ್ ನ್ಯಾಯಾಲಯ ಕಿರಿಯ ವಿಭಾಗದ ನ್ಯಾಯಾಧೀಶ ದಾಸರಿ ಕ್ರಾಂತಿ ಕಿರಣ್ ಹೇಳಿದರು.
ಮಂಗಳವಾರ ಮೆಣಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಮತದಾನ ದಿನ ಹಾಗೂ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮುದಾಯವಾದ ವಿದ್ಯಾರ್ಥಿಗಳು ಆಮಿಷಗಳಿಗೆ ಬಲಿಯಾಗದೆ ಜವಾಬ್ಧಾರಿಯಿಂದ ತಮ್ಮ ಪ್ರತಿನಿಧಿಗಳನ್ನು ಚುನಾಯಿಸಬೇಕು. ಪ್ರಜ್ಞಾವಂತ ಯುವ ಸಮುದಾಯ ದೇಶದ ಬೆನ್ನೆಲುಬಾಗಿದೆ. ಮತದಾನ ನಿಮ್ಮೆಲ್ಲರಿಗೂ ವರದಾನವಾಗಿದೆ. 18ವರ್ಷ ತುಂಬಿದ ಎಲ್ಲರೂ ಕಡ್ಡಾಯವಾಗಿ ಮತದಾನ ಗುರುತಿನ ಚೀಟಿ ಮಾಡಿಸಿಕೊಳ್ಳಬೇಕು. ಸುಭದ್ರ ದೇಶ ಕಟ್ಟುವಲ್ಲಿ ಯುವ ಜನಾಂಗದ ಪಾತ್ರ ಮಹತ್ವದ್ದಾಗಿದ್ದು, ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ವಕೀಲ ಎಚ್.ಆರ್.ವೆಂಕಟೇಶ್‌ಮೂರ್ತಿ ಮಾತನಾಡಿ, ಈ ದೇಶದ ಸಂವಿಧಾನ ಸರ್ವ ಶ್ರೇಷ್ಠವಾಗಿದೆ. ಸಂವಿಧಾನದಲ್ಲಿ ಎಲ್ಲಾ ರೀತಿಯ ಹಕ್ಕುಗಳನ್ನು ನೀಡಲಾಗಿದೆ. ಯುವಕರು ಸ್ವಾಮಿ ವಿವೇಕಾನಂದರ ತತ್ವ ಆದರ್ಶ ಪಾಲಿಸಬೇಕು. ಎಲ್ಲ ಧರ್ಮಗಳ ಸಾರ ಒಂದೇ. ತಮ್ಮ ಧರ್ಮ ಪಾಲಿಸುವ ಜತೆಗೆ ಪರಧರ್ಮವನ್ನು ಗೌರವಿಸಬೇಕು ನಾವು ಆ ಹಕ್ಕುಗಳನ್ನು ದುರುಪಯೋಗ ಮಾಡಿಕೊಳ್ಳದೆ ಸದ್ಬಳಕೆ ಮಾಡಿಕೊಳ್ಳಬೇಕು. ಯುವ ಜನಾಂಗ ಮತದಾನ ಎಂಬ ಮಹತ್ತರ ಕಾರ್ಯದಲ್ಲಿ ಗಣನೀಯ ಪಾತ್ರ ವಹಿಸಬೇಕು. ಮತದಾನ ಕೇವಲ ಹಕ್ಕಲ್ಲ, ನಮ್ಮ ಕರ್ತವ್ಯ. ಉತ್ತಮ ಸರ್ಕಾರ ರಚನೆಗೆ ಮತದಾನ ಅವಶ್ಯಕ ಎಂದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಮಂಜುನಾಥ್ ನಾಯ್ಕ. ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ದಿನಕರ್, ಸಮಾಜಶಾಸ್ತ್ರ ್ರ ವಿಭಾಗದ ಮುಖ್ಯಸ್ಥ ಲಕ್ಷ್ಮಣ ನಾಯಕ್, ಕನ್ನಡ ವಿಭಾಗದ ಮುಖ್ಯಸ್ಥೆ ರೂಪ,ಉಪನ್ಯಾಸಕ ಟಿ.ಮಂಜುನಾಥ್, ರುಖಿಯತ್, ವಿದ್ಯಾರ್ಥಿ ಮಹಮ್ಮದ್ ಸಹಾದ್ ಉಪಸ್ಥಿತರಿದ್ದರು.