

ವಿಜಯಪುರ:ಪ್ರಜಾಪ್ರಭುತ್ವದ ಯಶಸ್ಸಿಗೆ ಮುಖ್ಯವಾಗಿ ಚುನಾವಣೆಗಳಲ್ಲಿ ಸಕಾರಾತ್ಮಕವಾಗಿ ಭಾಗವಹಿಸಬೇಕು ಹಾಗೂ ತಮ್ಮ ತಮ್ಮ ಮತಗಳನ್ನು ಹಣ ಮತ್ತು ಇತರೆ ಪ್ರಲೋಭನೆಗಳಿಗೆ ಮಾರಿಕೊಳ್ಳದೆ ವಿವೇಚನೆಯಿಂದ ಮತ ಚಲಾಯಿಸಬೇಕು ಎಂದು ಕುಲಸಚಿವ ಶಂಕರಗೌಡ ಸೋಮನಾಳ ಸಲಹೆ ನೀಡಿದರು.
ನಗರ ಹೊರ ವಲಯದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಪರಿಶಿಷ್ಟ ಜಾತಿ& ಪರಿಶಿಷ್ಟ ಪಂಗಡಗಳ ಟಕದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಪರಿಕಲ್ಪನೆ, ಅದರ ಹುಟ್ಟು ಹಾಗೂ ವಿಶ್ವದ ಹಲವು ರಾಷ್ಟ್ರಗಳಲ್ಲಿ ಅದು ಬೆಳೆದು ಬಂದ ದಾರಿಗಳನ್ನು ವಿದ್ಯಾರ್ಥಿನಿಯರಿಗೆ ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಟಕದ ನಿರ್ದೇಶಕ ಮಲ್ಲಿಕಾರ್ಜುನ ಎನ್.ಎಲ್. ಮಾತನಾಡಿ, ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಯುವ ಜನತೆಗೆ ಸೂಕ್ತ ಮಾರ್ಗದರ್ಶನ ಅಗತ್ಯ. ಒಂದೊಮ್ಮೆ ಪ್ರಜಾಪ್ರಭುತ್ವ ಸಡಿಲಗೊಂಡರೆ ಅರಾಜಕತೆ ಉಂಟಾಗುವ ಅಪಾಯಗಳಿವೆ ಎಂದರು.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ, ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಾಮಾನ್ಯ ಜ್ಞಾನದ ಕುರಿತು ವಿದ್ಯಾರ್ಥಿನಿಯರಿಗೆ ರಸಪ್ರಸ್ನೆ ಸ್ಪರ್ಧೆ ನಡೆಯಿತು. ವಿಜೇತ ವಿಧ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.
ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಸಂಜೀವಕುಮಾರ ಗಿರಿ, ವೆಂಕೋಬಾ ನಾರಾಯಣಪ್ಪ, ಬಾಬು ಆರ್.ಎಲ್., ರಮೇಶ ಸೋನಕಾಂಬ್ಳೆ, ಯಲ್ಲಪ್ಪ ಕೋಂಬಿನೋರ ಮತ್ತಿತರರಿದ್ದರು.
ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿದರು.
**