

ಬೆಳಗಾವಿ: ಯುವಕರು ಆಸೆ, ಆಮಿಷಗಳಿಗೆ ಒಳಗಾಗದೆ ನಿರ್ಭಯವಾಗಿ ಮತದಾನ ಮಾಡಿ ಎಂದು ಕೆಎಲ್‌ಇ ಸಂಸ್ಥೆಯ ರಾಜಾಲಖಮಗೌಡ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯ ಪ್ರಾಚಾರ್ಯ ವಿಶ್ವನಾಥ ಕಾಮಗೋಳ ಹೇಳಿದರು.
ನಗರದ ಕೆ.ಎಲ್.ಇ ಸಂಸ್ಥೆಯ ರಾಜಾಲಖಮಗೌಡ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವವಿರುವ ರಾಷ್ಟ್ರಗಳಲ್ಲಿ ಮತದಾನವು ಪವಿತ್ರವಾದುದು. ಇಂದಿನ ಯುವಕರೇ ಮುಂದಿನ ನಾಗರಿಕರು ಮತ್ತು ನಾಯಕರು ಎಂದರು.
ಕನ್ನಡ ಉಪನ್ಯಾಸಕರಾದ ಸಹದೇವ ಬನ್ನಿಮಟ್ಟಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಡಾ.ಸಂದೀಪ ಜವಳಿ, ಮತದಾರರ ಸಾಕ್ಷರತಾ ಕ್ಲಬ್‌ನ ಸಂಯೋಜಕ ನಟರಾಜ ಪಾಟೀಲ ಇತರರಿದ್ದರು.