ಸಶಕ್ತ ಭಾರತ ನಿರ್ಮಾಣಕ್ಕಾಗಿ ಮತ ಚಲಾಯಿಸಿ; ಡಿಸಿ ಟಿ.ಭೂಬಾಲನ್

VOTING AWARNESS
ವಿಜಯಪುರ ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಜಿಲ್ಲಾ ಚುನಾವಣೆ ಅಧಿಕಾರಿ ಟಿ.ಭೂಬಾಲನ್ ಅವರು ಮತದಾನ ಜಾಗೃತಿ ವಾಹನಕ್ಕೆ ಹಸಿರು ನಿಶಾನೆ ತೋರಿದರು. ಸಿಇಒ ರಿಷಿ ಆನಂದ, ಎಡಿಸಿ ಮಹಾದೇವ ಮುರಗಿ ಮತ್ತಿತರರಿದ್ದಾರೆ.
Published on

ವಿಜಯಪುರ: ಸದೃಢ ಹಾಗೂ ಸಶಕ್ತ ಭಾರತ ನಿರ್ಮಾಣಕ್ಕಾಗಿ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಮತದಾನದ ಅವಶ್ಯಕತೆ ಇದೆ. ಹಾಗಾಗಿ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಚುನಾವಣಾಧಿಕಾರಿ ಟಿ.ಭೂಬಾಲನ್ ಹೇಳಿದರು.

ಇಲ್ಲಿನ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಲೋಕಸಭೆ ಚುನಾವಣೆ-2024ರ ನಿಮಿತ್ತ ಮತದಾನ ಜಾಗೃತಿ ಮೂಡಿಸುವ ಸ್ಥಬ್ಧಚಿತ್ರ ವಾಹನಕ್ಕೆ ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಮತ ಚಲಾಯಿಸುವುದರ ಮೂಲಕ ದೇಶದ ಸಮಗ್ರತೆ ಹಾಗೂ ಪ್ರಗತಿಗೆ ಮುನ್ನುಡಿ ಬರೆಯಬೇಕು. ನಾವು ಹಾಕುವ ಮತ ಕೇವಲ ಒಬ್ಬ ವ್ಯಕ್ತಿಗೆ ಸೀಮಿತವಾಗಿರುವುದಿಲ್ಲ, ಅದು ದೇಶದ ಭವಿಷ್ಯವನ್ನು ನಿರ್ಮಾಣ ಮಾಡುವ, ಅಭಿವೃದ್ಧಿಗೆ ಪೂರಕವಾಗಿರುವ ಮೆಟ್ಟಿಲು ಆಗಿರುತ್ತದೆ ಎಂದು ಹೇಳಿದರು.

ಜಿಪಂ ಸಿಇಒ ರಿಷಿ ಆನಂದ ಮಾತನಾಡಿ, ಮತದಾನದಿಂದ ದೇಶದ ಆಭಿವೃದ್ಧಿ ಸಾಧ್ಯ. ನನ್ನ ಒಂದು ಮತದಾನವೂ ದೇಶದ ಭವಿಷ್ಯಕ್ಕೆ ಸಹಕಾರಿಯಾಗುತ್ತದೆ ಎಂಬುದನ್ನು ಅರಿತುಕೊಂಡು ಮತ ಚಲಾಯಿಸಬೇಕು. ಬಹುದೊಡ್ಡ ಪ್ರಜಾಪ್ರಭುತ್ವ ದೇಶ ಭಾರತಕ್ಕೆ ಮತದಾನ ಎಂಬುದು ಅತ್ಯಂತ ಪ್ರಾಮುಖ್ಯತೆ ಹೊಂದಿರುವ ಕರ್ತವ್ಯವಾಗಿದೆ ಎಂದರು.

ಈಗಾಗಲೇ ಸ್ವೀಪ್ ವತಿಯಿಂದ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲೆಯಲ್ಲಿ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರೂ ತಪ್ಪದೆ ಮತ ಚಲಾಯಿಸಿ ಸುಭದ್ರ ದೇಶ ನಿರ್ಮಾಣ ಮಾಡಲು ಸಹಕರಿಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಮಹಾನಗರ ಪಾಲಿಕೆ ಆಯುಕ್ತ ಅರ್ಷದ, ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪುಂಡಲಿಕ ಮಾನವರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net