

ಮಂಡ್ಯ: ಪ್ರಜಾಪ್ರಭುತ್ವ ಹಾಗೂ ಚುನಾವಣಾ ವ್ಯವಸ್ಥೆಯನ್ನು ಬುಡಮೇಲು ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ಆರೋಪಿಸಿದರು.
ನಗರದ ಹೊಳಲು ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ’ವೋಟ್ ಚೋರಿ’ ವಿರುದ್ಧ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮತಗಳ್ಳತನದ ವಿರುದ್ಧ ಜಿಲ್ಲೆಯ ಎಲ್ಲ ಭಾಗದಲ್ಲೂ ಸಹಿ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಮತಗಳ್ಳತನ ಮಾಡುವ ಮೂಲಕ ಬಿಜೆಪಿ ಅಧಿಕಾರ ಹಿಡಿಯುತ್ತಿದೆ. ಮತದಾರರ ಪಟ್ಟಿಯಲ್ಲಿ ಸುಳ್ಳು ಹೆಸರು ಇರುವುದನ್ನು ಕಾಂಗ್ರೆಸ್ ಸಾಕ್ಷ್ಯ ಸಮೇತ ಜನರ ಮುಂದಿಟ್ಟಿದೆ. ಒಬ್ಬ ಮತದಾರ ಹಲವು ಕ್ಷೇತ್ರಗಳಲ್ಲಿ ಮತ ಚಲಾವಣೆ ಮಾಡಿರುವುದು ಪತ್ತೆಯಾಗಿದೆ. ಇದರ ವೀಡಿಯೊ ದಾಖಲೆಗಳನ್ನು ಬಿಡುಗಡೆ ಮಾಡಲು ಚುನಾವಣಾ ಆಯೋಗ ಮೀನಾ ಮೇಷ ಎಣಿಸುತ್ತಿದೆ ಎಂದು ದೂರಿದರು.
ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕಾಗಿದ್ದ ಆಯೋಗ ಬಿಜೆಪಿಯ ಕೈಗೊಂಬೆಯಾಗಿದೆ. ಹೊರ ರಾಜ್ಯದ ಮತದಾರರು ಕರ್ನಾಟಕದ ಮತದಾರರ ಪಟ್ಟಿಯಲ್ಲಿದ್ದರೂ ಕಣ್ಮುಚ್ಚಿ ಕುಳಿತಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮುಂದಿಟ್ಟಿರುವ ಪ್ರಶ್ನೆಗಳಿಗೆ ಉತ್ತರ ನೀಡುವುದನ್ನು ಬಿಟ್ಟು ಬಿಜೆಪಿಯ ಮುಖವಾಣಿಯಂತೆ ವರ್ತಿಸುತ್ತಿದೆ ಎಂದು ಕಿಡಿಕಾರಿದರು.
ರಾಜ್ಯ ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಮಾತನಾಡಿ, ಮತದಾನ ಬಹಳ ಪಾವಿತ್ರ್ಯವಾಗಿದೆ. ಇದನ್ನು ಅರಿತುಕೊಳ್ಳಬೇಕು. ಮತಗಳ್ಳತನದ ಹೊಸ ಪಿಡುಗು ನಮ್ಮ ಮಧ್ಯ ಉದ್ಭವವಾಗಿರುವುದು ಆತಂಕಕಾರಿ ಸಂಗತಿ. ಚುನಾವಣಾ ಆಯೋಗ ನ್ಯಾಯಯುತ ಕಾರ್ಯವನ್ನು ಒದಗಿಸಿಕೊಡಬೇಕೆಂದು ಸಹಿ ಸಂಗ್ರಹ ಅಭಿಯಾನ ಮಾಡುತ್ತಿದ್ದೇವೆ. ಸಾರ್ವಜನಿಕರು ಸಹಿ ಸಂಗ್ರಹ ಅಭಿಯಾನಕ್ಕೆ ಸಹಕರಿಸಿ. ನಮ್ಮ ಹಕ್ಕನ್ನು ಉಳಿಸಿಕೊಳ್ಳುವ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶುಭದಾಯಿನಿ, ಸಣ್ಣ ಕೈಗಾರಿಕೆ ಇಲಾಖೆ ಉಪಾಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಅಪ್ಪಾಜಿ, ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಸಾತನೂರು ಕೃಷ್ಣ, ಜಿಲ್ಲಾ ಕಾಂಗ್ರೆಸ್ ವಕ್ತಾರ ಸಿ.ಎಂ. ದ್ಯಾವಪ್ಪ, ಮುಡಾ ನಿರ್ದೇಶಕ ಅರುಣ್‌ಕುಮಾರ್, ಮುಖಂಡರಾದ ಚಂದಗಾಲು ವಿಜಯಕುಮಾರ್, ಜಯಲಕ್ಷ್ಮೀ, ಅಭಿಲಾಷ್, ಚಿಕ್ಕಬಳ್ಳಿ ಕೃಷ್ಣ, ಹಳುವಾಡಿ ವೆಂಕಟೇಶ್, ಎನ್.ಸೋಮಶೇಖರ್, ರಾಜಣ್ಣ, ಉದಯ್, ಹನ್ಸಿಯಬಾನ್, ಶಕುಂತಲಾ, ವೀಣಾಶಂಕರ್ ಇತರರಿದ್ದರು.