ರಾಷ್ಟ್ರಾದ್ಯಂತ ವೋಟ್ ಚೋರಿ ಅಭಿಯಾನ: ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿಕೆ

Vote stealing campaign against BJP Mandya
Published on

ಮಳವಳ್ಳಿ: ದೇಶದಲ್ಲಿ ನ್ಯಾಯಸಮ್ಮತವಾಗಿ ಚುನಾವಣಾ ಪ್ರಕ್ರಿಯೆ ನಡೆಯಬೇಕು. ಮಾತ್ರವಲ್ಲದೆ ಜನಾಭಿಪ್ರಾಯ ಹಾಗೂ ಜನಾದೇಶಕ್ಕೆ ಮನ್ನಣೆ ಸಿಗಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷದ ವತಿಯಿಂದ ರಾಷ್ಟ್ರಾದ್ಯಂತ ಬಿಜೆಪಿ ವಿರುದ್ಧ ವೋಟ್ ಚೋರಿ ಅಭಿಯಾನ ನಡೆಸಲಾಗುತ್ತಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಬಿಜೆಪಿ ವಿರುದ್ಧ ನಡೆಸುತ್ತಿರುವ ವೋಟ್ ಚೋರಿ ಅಭಿಯಾನಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಪಟ್ಟಣದ ಅನಂತ್‌ರಾಮ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಒಂದು ಸ್ವತಂತ್ರ ಸಂಸ್ಥೆ ತನ್ನ ಜವಾಬ್ದಾರಿಯನ್ನು ಮರೆತರೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ. ತಪ್ಪುಗಳನ್ನು ಸರಿಪಡಿಸಿ ಸಂವಿಧಾನದ ಮೂಲ ಆಶಯವನ್ನು ಎತ್ತಿ ಹಿಡಿಯಬೇಕೆಂಬುವುದು ನಮ್ಮೆಲ್ಲರ ಒತ್ತಾಯವಾಗಿದೆ ಎಂದು ಹೇಳಿದರು.

ದೇಶದಲ್ಲಿ ನಡೆಯುತ್ತಿರುವ ದುಷ್ಟಶಕ್ತಿಗಳ ಅಟ್ಟಹಾಸವನ್ನು ಮೆಟ್ಟಿನಿಂತು ಪ್ರಜಾಪ್ರಭುತ್ವ ಉಳಿಸಲು ರಾಹುಲ್‌ಗಾಂಧಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದಾರೆ. ಅವರ ಹೋರಾಟಕ್ಕೆ ಬೆಂಬಲ ನೀಡಲು ಸಾರ್ವಜನಿಕರಿಂದ ಸಹಿ ಸಂಗ್ರಹ ಮಾಡಲಾಗುತ್ತಿದೆ. ರಾಜ್ಯದಲ್ಲಿ ಸ್ಥಿರ ಸರ್ಕಾರ ಇದ್ದರೂ ಕೂಡ ವಿರೋಧ ಪಕ್ಷಗಳು ಪ್ರತಿನಿತ್ಯ ಇಲ್ಲಸಲ್ಲದ ಆರೋಪ ಮಾಡುತ್ತಾ ಕಾಲ ಕಳೆಯುತ್ತಿವೆ. ಅಧಿಕಾರ ಇದ್ದಾಗ ಸಾಧನೆ ಮಾಡದೇ ಬಡವರ ಕಾರ್ಯಕ್ರಮ ಕೊಡಲು ಗೊತ್ತಿಲ್ಲದೇ ಮುಖ್ಯಮಂತ್ರಿ ಬದಲಾವಣೆಯಲ್ಲಿಯೇ ಕಾಲ ವ್ಯಯ ಮಾಡಿದ ವಿಪಕ್ಷಗಳಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

ಚುನಾವಣಾ ಆಯೋಗ ಮತದಾನಕ್ಕೆ ಮೂರು ತಿಂಗಳ ಮುಂಚಿತವಾಗಿ ಮತದಾರರ ಪಟ್ಟಿಯನ್ನು ಸಿದ್ದಪಡಿಸುತ್ತಿತ್ತು. ಆದರೆ ಇತ್ತೀಚಿನ ವರ್ಷದಲ್ಲಿ ಮತದಾರರ ಪಟ್ಟಿಯಲ್ಲಿರುವ ಹೆಸರುಗಳು ಡಿಲಿಟ್ ಆಗಿರುತ್ತವೆ. ಮತ್ತೊಂದು ಕಡೆಗಳಲ್ಲಿ ಹೆಚ್ಚಿನ ಹೆಸರು ಸೇರ್ಪಡೆಗೊಂಡಿರುತ್ತವೆ. ಮತದಾರರ ಪಟ್ಟಿಯನ್ನು ಮೂಲ ಲಭ್ಯತೆಯನ್ನು ಕೊಡದೇ ಮೋಸದ ರೀತಿಯಲ್ಲಿ ಚುನಾವಣೆ ನಡೆಸಲಾಗುತ್ತಿದೆ. ದೇಶದಲ್ಲಿ ವೋಟ್ ಚೋರಿ ಪ್ರಚಾರ ಮಾಡಿದ ನಂತರ ಹಲವು ಘಟಾನುಘಟಿ ರಾಜಕಾರಣಿಗಳು ರಾಹುಲ್‌ಗಾಂಧಿ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ. ಬಿಹಾರದ ಜನರು ಸತ್ಯವನ್ನು ಅರಿತು ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ. ಬಿಹಾರದ ಹೆಬ್ಬಾಗಿಲಿನ ಮೂಲಕ ರಾಷ್ಟ್ರದಲ್ಲಿ ಹೊಸ ಕ್ರಾಂತಿ ನಡೆಲಿದೆ ಎಂದು ಭವಿಷ್ಯ ನುಡಿದರು.

ಚುನಾವಣೆ ಮತ ಎಣಿಕೆಯಲ್ಲಿ ಲೋಪ ಸೇರಿದಂತೆ ಹಲವಾರು ವಿಚಾರಗಳನ್ನು ಜನರು ನೋಡುತ್ತಿದ್ದಾರೆ. ರಾಷ್ಟ್ರಮಟ್ಟದ ಅದೇಶದಂತೆ ಮತ ಚೋರಿ ವಿಚಾರವಾಗಿ ಜನಾಭಿಪ್ರಾಯ ಹಾಗೂ ಸಹಿಯನ್ನು ಸಂಗ್ರಹಿಸಬೇಕೆಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ಕಾಂಗ್ರೆಸ್ ಕಾರ್ಯಕರ್ತರು ಒಂದು ವಾರದೊಳಗೆ ಪ್ರತಿ ಬೂತ್‌ನಲ್ಲಿ ಕನಿಷ್ಟ ಎರಡು ಸಾವಿರ ಸಹಿಯನ್ನು ಸಂಗ್ರಹಿಸಬೇಕೆಂದು ಕರೆ ನೀಡಿದರು.

ಕಾಂಗ್ರೆಸ್ ಮುಖಂಡರಾದ ರಾಮಕೃಷ್ಣ, ಕೃಷ್ಣೇಗೌಡ, ಸಿ.ಪಿ.ರಾಜು, ದೊಡ್ಡಯ್ಯ, ಲಿಂಗರಾಜು, ದೇವರಾಜು, ಚಿಕ್ಕಲಿಂಗಯ್ಯ, ಪುಟ್ಟಬಸವಯ್ಯ, ಆರ್.ಎನ್.ವಿಶ್ವಾಸ್, ನೂರುಲ್ಲಾ, ಚೌಡಪ್ಪ, ಸುರೇಶ್, ಸುಷ್ಮಾರಾಜು, ಮಾದಯ್ಯ, ಮಾದೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net