ಮತಗಳ ಮಾರಾಟ ಆತಂಕಕಾರಿ ಬೆಳವಣಿಗೆ

28bhr 1
ಕಡ್ಲೇಮಕ್ಕಿಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಶಾಸಕ ಟಿ.ಡಿ.ರಾಜೇಗೌಡ ಅನಾವರಣಗೊಳಿಸಿದರು. ಸದಾಶಿವ, ಚಂದ್ರಮ್ಮ, ಎಂ.ಎಸ್.ಅರುಣೇಶ್, ಓ.ಡಿ.ಸ್ಟೀಫನ್, ಮಹಮ್ಮದ್ ಹನೀಫ್, ನಟರಾಜ್ ಇತರರಿದ್ದರು.
Published on

ಬಾಳೆಹೊನ್ನೂರು: ಡಾ. ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ದೇಶದ ಕೋಟ್ಯಂತರ ಜನರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಎನ್.ಆರ್.ಪುರ ರಸ್ತೆಯ ಕಡ್ಲೇಮಕ್ಕಿಯಲ್ಲಿ ಕುವೈತ್ ಉದ್ಯಮಿ ಕ್ಲಿಫರ್ಡ್ ಲಾರೆನ್ಸ್ ಸಿಕ್ವೇರಾ ಅವರು ನೂತನವಾಗಿ ನಿರ್ಮಿಸಿರುವ ಡಾ. ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಯನ್ನು ಭಾನುವಾರ ಅನಾವರಣಗೊಳಿಸಿ ಅವರು ಮಾತನಾಡಿದರು.
ದೇಶದ ಪ್ರತಿಯೊಬ್ಬ ಪ್ರಜೆಗಳಿಗೂ ಸಂವಿಧಾನ ಸಮಾನವಾದ ಹಕ್ಕು ನೀಡಿದೆ. ಪ್ರತಿಯೊಬ್ಬರು ಸಂವಿಧಾನ ಓದಬೇಕು. ಆಗ ಮಾತ್ರ ದೇಶ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯ. ಇಂದು ಕೆಲವೆಡೆ ಜಾತಿ, ಧರ್ಮ, ಮತಗಳ ನಡುವೆ ವಿಷಬೀಜ ಬಿತ್ತಿ, ಶಾಂತಿ ಕದಡಲು ಕೆಲವರು ಯತ್ನಿಸುತ್ತಿದ್ದಾರೆ. ದೇಶದಲ್ಲಿ ಸ್ವಾರ್ಥ ರಾಜಕಾರಣ, ಅಧಿಕಾರಕ್ಕಾಗಿ ಕೆಲವರು ಮುನ್ನುಗ್ಗುತ್ತಿದ್ದಾರೆ. ಇದಕ್ಕಾಗಿ ಕೆಲವು ಪ್ರಜೆಗಳು ಮತಗಳನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಇದು ಆತಂಕಕಾರಿಯಾಗಿದೆ ಎಂದರು.
ಉದ್ಯಮಿ ಕ್ಲಿಫರ್ಡ್ ಲಾರೆನ್ಸ್ ಸಿಕ್ವೇರಾ ಅವರು ಅಂಬೇಡ್ಕರ್ ಅವರ ಮೇಲಿನ ಗೌರವದಿಂದ ಕ್ಷೇತ್ರದಲ್ಲಿಯೇ ಪ್ರಥಮ ಬಾರಿಗೆ ಅವರ ಪುತ್ಥಳಿ ನಿರ್ಮಿಸಿ ಅನಾವರಣಗೊಳಿಸಿರುವುದು ಶ್ಲಾಘನೀಯವಾಗಿದೆ. ವಿದೇಶದಲ್ಲಿದ್ದರೂ ಸ್ವಗ್ರಾಮದ ಕುರಿತು ಅಪಾರ ಕಾಳಜಿ, ಅಭಿಮಾನವನ್ನು ಹೊಂದಿರುವ ಕ್ಲಿಫರ್ಡ್ ಅವರು ನೆರೆ, ಕರೊನಾ ಸಂದರ್ಭದಲ್ಲಿ ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸಿದ್ದಾರೆ ಎಂದು ಶ್ಲಾಘಿಸಿದರು.
ಸಾಮಾಜಿಕ ಕಾರ್ಯಕರ್ತೆ ಕೆ.ಸಿ.ಅಕ್ಷತಾ ಮಾತನಾಡಿ, ನಮ್ಮ ಬದುಕಿಗೆ ಘನತೆ, ಗೌರವ ತಂದಿರುವುದು ಡಾ. ಬಿ.ಆರ್.ಅಂಬೇಡ್ಕರ್. ಇತಿಹಾಸ ಹಾಗೂ ಸಂವಿಧಾನವು ತಾಯಿಯ ಗರ್ಭ ಇದ್ದಂತೆ. ಅದನ್ನು ಎಂದಿಗೂ ತಿರುಚಲು ಸಾಧ್ಯವಿಲ್ಲ. ಆದರೆ ಇಂದು ಇತಿಹಾಸ, ಸಂವಿಧಾನವನ್ನು ತಿರುಚುವ ಪ್ರಯತ್ನ ನಡೆಯುತ್ತಿದೆ ಎಂದರು.
ಸಂವಿಧಾನ ಜಾರಿಯಾಗಿ 75 ವರ್ಷ ಕಳೆದರೂ ಮನುವಾದ, ವರ್ಣಶಾಸ್ತ್ರ ಜಾರಿಯಲ್ಲಿರುವುದು ವಿಷಾದನೀಯ. ಕೆಲವು ವರ್ಗದವರು ಹಿಂದುಳಿದವರು, ಪರಿಶಿಷ್ಟ ಜಾತಿ ಹಾಗೂ ವರ್ಗದವರಿಗೆ ಮಾತ್ರ ಧರ್ಮದ ಅಮಲನ್ನು ತುಂಬಿ ತಮ್ಮ ಮಕ್ಕಳನ್ನು ಉನ್ನತ ಹುದ್ದೆಗೆ ಏರಿಸುತ್ತಿದ್ದಾರೆ ಎಂದು ದೂರಿದರು.
ಅಂಬೇಡ್ಕರ್ ಅವರ ಹೋರಾಟ, ಸಂವಿಧಾನದ ಫಲವಾಗಿ ಇಂದು ನಾವು ಎಲ್ಲ ಸುಖ, ಗೌರವಗಳನ್ನು ಪಡೆಯುತ್ತಿದ್ದೇವೆ. ಇದರ ಪೂರ್ವಾಪರಗಳನ್ನು ತಿಳಿದುಕೊಳ್ಳಲು ಅಂಬೇಡ್ಕರ್ ಅವರ ಶ್ರಮ, ಹೋರಾಟ, ಇತಿಹಾಸವನ್ನು ನಾವುಗಳು ತಿಳಿದುಕೊಳ್ಳಬೇಕಿದೆ. ಸಂವಿಧಾನ ಇಂದು ಅಪಾಯದಂಚಿನಲ್ಲಿದೆ. ಪ್ರತಿಯೊಬ್ಬರು ಸಂವಿಧಾನದ ಪ್ರತಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕಿದೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.
ಭೀಮ್ ಆರ್ಮಿಯ ನಾಗರಾಜ, ಪ್ರಾಚಾರ್ಯ ಕೆ.ಆರ್.ಬೂದೇಶ್, ನಿವೃತ್ತ ಶಿಕ್ಷಕ ನಿರ್ವಾಣಪ್ಪ, ಗ್ರಾಪಂ ಅಧ್ಯಕ್ಷ ಸದಾಶಿವ, ಜಿಪಂ ಮಾಜಿ ಸದಸ್ಯೆ ಚಂದ್ರಮ್ಮ, ಗ್ರಾಪಂ ಸದಸ್ಯರಾದ ಎಂ.ಎಸ್.ಅರುಣೇಶ್, ಇಬ್ರಾಹಿಂ ಶಾಫಿ, ಅಂಬುಜಾ, ಮಹೇಶ್ ಆಚಾರ್ಯ, ಮಹಮ್ಮದ್ ಜುಹೇಬ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಗೇರುಬೈಲು, ಆಟೋ ಸಂಘದ ಅಧ್ಯಕ್ಷ ಸಂದೇಶ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹನೀಫ್, ಪ್ರಮುಖರಾದ ಜಗದೀಶ್ ಅರಳೀಕೊಪ್ಪ, ಓ.ಡಿ.ಸ್ಟೀಫನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net