

ಮಡಿಕೇರಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಸೆಲ್ಫಿ ಕಂಟೆಸ್ಟ್ ಸ್ಪರ್ಧೆ ಆಯೋಜಿಸಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಸ್.ಆಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತದಾನ ಮಾಡಿದ ಎಲ್ಲರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಯುವಕ ಯುವತಿಯರನ್ನು ಒಳಗೊಂಡಂತೆ ಜಿಲ್ಲೆಯ ಎಲ್ಲಾ ಮತದಾರರು ತಮ್ಮ ಕುಟುಂಬದವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದೆ. ಉತ್ತಮ ಫೋಟೋಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮತದಾನ ಮಾಡಿದ ನಂತರ ಏಕಮಾತ್ರವಾಗಿ ಅಥವಾ ಗುಂಪಿನಲ್ಲಿ ಸೆಲ್ಫಿಯನ್ನು ಕ್ಲಿಕ್ಕಿಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಕುಟುಂಬ ವರ್ಗ, ಸ್ನೇಹಿತರೊಂದಿಗೆ ಇರುವ ಫೋಟೋಗಳಿಗೆ ಆದ್ಯತೆ ನೀಡಲಾಗುವುದು. ಮತಗಟ್ಟೆಯ ಒಳಗೆ ಮೊಬೈಲ್ ಪೋನ್ ತೆಗೆದುಕೊಂಡು ಹೋಗುವಂತಿಲ್ಲ. ಮತದಾನ ಮಾಡಿದ ನಂತರವಷ್ಟೇ ತಮ್ಮ ಫೋನನ್ನು ಬಳಸಿ ಮತಗಟ್ಟೆಯ ಹೊರಭಾಗದಲ್ಲಿ ನಿಂತು ಸೆಲ್ಫಿ ತೆಗೆದು ಕಳುಹಿಸಬಹುದು ಎಂದು ಹೇಳಿದ್ದಾರೆ.
ಛಾಯಾಚಿತ್ರವನ್ನು ಮೇ೧೦ ರ ಮತದಾನದ ದಿನದಂದು ಸಂಜೆ ೬ ಗಂಟೆಯೊಳಗೆ ಕಳುಹಿಸಬೇಕು. ಉತ್ತಮವಾದ ಒಂದು ಫೋಟೋ ಮಾತ್ರ ಕಳುಹಿಸಿ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಫೋಟೋವನ್ನು ೬೩೬೩೯೯೪೧೭೨ ಅಥವಾ ೯೭೪೩೧೪೪೧೩೫ ನಂಬರ್‌ಗೆ ವಾಟ್ಸಾಪ್ ಮೂಲಕ ಕಳುಹಿಸುವುದು. ಸ್ಪರ್ಧಿಯ ಹೆಸರು, ತಂದೆಯ/ ಗಂಡನ ಹೆಸರು, ಮತಗಟ್ಟೆ ಸಂಖ್ಯೆ, ಜನ್ಮ ದಿನಾಂಕ ಹಾಗೂ ತಮ್ಮ ಮೊಬೈಲ್ ಸಂಖ್ಯೆಯ ವಿವರಗಳೊಂದಿಗೆ ಯಾವುದಾದರೂ ಒಂದು ಮೊಬೈಲ್ ಸಂಖ್ಯೆಗೆ ಸೆಲ್ಫಿಯನ್ನು ಕಳುಹಿಸಬೇಕು ಎಂದರು.
ಮತಗಟ್ಟೆಯ ೧೦೦ ಮೀಟರ್ ಒಳಗಿನ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಮತ ಹಾಕಿದ ಗುರುತಾಗಿ, ಮತ ಕೇಂದ್ರದಲ್ಲಿ ಬೆರಳಿಗೆ ಹಾಕಿರುವ ಇಂಕ್ ಕಾಣಿಸುವಂತೆ ಫೋಟೋ ತೆಗೆಯಬೇಕು. ತಾವುಗಳು ಕಳುಹಿಸುವ ಉತ್ತಮವಾದ ಫೋಟೋಗಳನ್ನು ಜಿಲ್ಲಾಡಳಿತದ ವೆಬ್‌ಸೈಟ್, ಫೇಸ್‌ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಬಳಸಲಾಗುವುದು ಎಂದು ಡಾ.ಎಸ್.ಆಕಾಶ್ ತಿಳಿಸಿದ್ದಾರೆ.