ಪ್ರವಾಸಿ ತಾಣ ಅಭಿವೃದ್ಧಿಗೆ ವೋಟ್ ಮಾಡಿ..!

Mysore palace
Published on

ಸದೇಶ್ ಕಾರ್ಮಾಡ್ ಮೈಸೂರು
ನಮ್ಮ ಜಿಲ್ಲೆಯ ಪ್ರವಾಸಿ ತಾಣಗಳು ಅಭಿವೃದ್ಧಿ ಹೊಂದುವುದು ಯಾವಾಗ ಎಂಬ ಕೊರಗು ಎಲ್ಲರಲ್ಲೂ ಇದ್ದದ್ದೇ. ಆದರೆ, ಈ ಕೊರಗು ನೀಗುವ ಕಾಲ ಕೂಡಿ ಬಂದಿದೆ. ಜಿಲ್ಲೆಯ ಪ್ರವಾಸಿ ತಾಣಗಳು ಅಭಿವೃದ್ಧಿಯ ಸ್ಪರ್ಶ ಪಡೆಯಲು ನೀವು ಒಂದು ವೋಟ್ ಮಾಡಿದರೆ ಸಾಕು..!

ಜನರ ಅಭಿಪ್ರಾಯ ಆಧರಿಸಿ ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವ ‘ದೇಖೋ ಅಪ್ನಾ ದೇಶ್ : ಪೀಪಲ್ಸ್ ಚಾಯ್ಸ-2024’ ಯೋಜನೆಯನ್ನು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಜಾರಿಗೆ ತಂದಿದೆ. ಯೋಜನೆಯಡಿ ಪ್ರತಿ ಜಿಲ್ಲೆಯ 4 ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವಂತೆ ಸಾರ್ವಜನಿಕರು ವೋಟ್ ಮಾಡಬಹುದು. ಜಿಲ್ಲೆಯಲ್ಲಿ ಒಟ್ಟು 16 ಪ್ರವಾಸಿ ತಾಣಗಳನ್ನು ಈ ಯೋಜನೆಗೆ ಪಟ್ಟಿ ಮಾಡಲಾಗಿದ್ದು, ಈ ಪೈಕಿ 4 ಪ್ರವಾಸಿ ತಾಣಗಳನ್ನು ವೋಟ್ ಮೂಲಕ ಆಯ್ಕೆ ಮಾಡಬಹುದು. ಅತಿ ಹೆಚ್ಚು ವೋಟಿಂಗ್ ಪಡೆಯುವ ತಾಣದ ಅಭಿವೃದ್ಧಿಗೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ ಅನುದಾನ ಬಿಡುಗಡೆಯಾಗಲಿದೆ. ಹಾಗಾಗಿ ಜನರು ಮಾಡುವ ವೋಟಿಂಗ್ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಅನುದಾನ ಹರಿದು ಬರುವಂತೆ ಮಾಡುತ್ತದೆ.

ಜಿಲ್ಲೆಯಲ್ಲಿ ಧಾರ್ಮಿಕ, ಸಾಂಸ್ಕೃತಿ, ಪಾರಂಪರಿಕ ಹಾಗೂ ನೈಸರ್ಗಿಕ ಪ್ರವಾಸಿ ತಾಣಗಳು ಸಾಕಷ್ಟು ಸಂಖ್ಯೆಯಲ್ಲಿ ಇದೆ. ಮೈಸೂರು ಅರಮನೆ ವೀಕ್ಷಿಸುವ ಸಲುವಾಗಿಯೇ ವಿಶ್ವದ ವಿವಿಧ ಭಾಗಗಳಿಂದ ಪ್ರವಾಸಿಗರು ಪ್ರತಿ ವರ್ಷ ಜಿಲ್ಲೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿ ಸುತ್ತಾರೆ. ಜಿಲ್ಲೆಗೆ ಮತ್ತಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಎಲ್ಲ ರೀತಿಯ ಅವಕಾಶಗಳು ಇದ್ದು, ಇದಕ್ಕೆ ಪೂರಕವಾಗಿ ಪ್ರವಾಸಿ ತಾಣಗಳು ಸಹ ಅಭಿವೃದ್ಧಿ ಹೊಂದಬೇಕಾಗಿದೆ. ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ವಿಶ್ವದರ್ಜೆಯ ಸೌಲಭ್ಯಗಳು ದೊರೆಯುವ ಅವಶ್ಯಕತೆ ಇದೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಮೈಸೂರು ಸೇರಿದಂತೆ ದೇಶದ ವಿವಿಧ ಭಾಗಗಳ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮುಂದಾಗಿದ್ದು, ಇದಕೋಸ್ಕರ ‘ದೇಖೋ ಅಪ್ನಾ ದೇಶ್ : ಪೀಪಲ್ಸ್ ಚಾಯ್ಸ-2024’ ಎಂಬ ವಿನೂತನ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯನ್ನು ಮಾ.7 ರಂದು ಜಾರಿಗೊಳಿಸಲಾಗಿದ್ದು, ಈಗಾಗಲೇ ಜಿಲ್ಲೆಯ ಹಲವಾರು ಜನರು ತಮ್ಮ ನೆಚ್ಚಿನ 4 ಪ್ರವಾಸಿ ತಾಣಗಳು ಅಭಿವೃದ್ಧಿಯಾಗಬೇಕು ಎಂದು ಮತ ಚಲಾಯಿಸಿದ್ದಾರೆ. ಸೆ.15ರವರೆಗೆ ಮತ ಚಲಾಯಿ ಸಲು ಅವಕಾಶ ಇದೆ.

ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳು ಇದ್ದು, ಅನುದಾನದ ಕೊರತೆಯಿಂದ ಅವುಗಳಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕೇಂದ್ರ ಸರ್ಕಾರದಿಂದ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅನುದಾನ ಪಡೆದುಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ. ಜಿಲ್ಲೆಯ ಜನರ ಸಹಕಾರ ದೊರೆತರೆ ಈ ಯೋಜನೆಯಡಿ ಜಿಲ್ಲೆ ಆಯ್ಕೆಗೊಳ್ಳುವುದು ನಿಶ್ಚಿತ. ಈ ಕುರಿತು ಪ್ರವಾಸೋದ್ಯಮ ಇಲಾಖೆಯು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಸುತ್ತಿದ್ದಾರೆ. ಆದರೆ, ಕೆಲವು ಜನರು ಆನ್‌ಲೈನ್‌ನಲ್ಲಿ ಆಗುತ್ತಿರುವ ವಂಚನೆಯಿಂದ ವೋಟ್ ಮಾಡಲು ಹಿಂದೇಟು ಹಾಕುತ್ತಿರುವುದು ಕಂಡು ಬರುತ್ತಿದೆ. ಆದರೆ, ಇದು ಕೇಂದ್ರ ಸರ್ಕಾರದ ಅಧಿಕೃತ ಯೋಜನೆಯಾಗಿದ್ದು, ಜನರು ಆತಂಕ ಪಡದೆ ವೋಟ್ ಮಾಡಬೇಕು ಎಂಬುದು ಪ್ರವಾಸೋದ್ಯಮ ಇಲಾಖೆಯ ಮನವಿಯಾಗಿದೆ.

ವೋಟಿಂಗ್ ಮಾಡುವುದು ಹೇಗೆ?: ‘ದೇಖೋ ಅಪ್ನಾ ದೇಶ್ : ಪೀಪಲ್ಸ್ ಚಾಯ್ಸ-2024’ ಯೋಜನೆಗೆ ಜಿಲ್ಲೆಯ ನಾಲ್ಕು ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಲು ಸಾರ್ವಜ ನಿಕರು https://innovateindia.mygov.in/dekho-apna-desh/ ಈ ಲಿಂಕ್ ಬಳಸಬೇಕು. ಈ ಲಿಂಕ್‌ಗೆ ಭೇಟಿ ನೀಡಿ VOTE NOW ಎಂಬ ಜಾಗದಲ್ಲಿ ಕ್ಲಿಕ್ ಮಾಡಿ ವೋಟಿಂಗ್ ಮಾಡಬಹುದು. ಇಲ್ಲಿ ಸಾರ್ವಜನಿಕರು ತಮ್ಮ ಹೆಸರು, ಮೊಬೈಲ್ ಸಂಖ್ಯೆ, ವಯಸ್ಸು ಸೇರಿದಂತೆ ಇನ್ನಿತರೆ ಪ್ರಾಥಮಿಕ ಮಾಹಿತಿ ಭರ್ತಿ ಮಾಡಬೇಕು. ಆ ನಂತರ ನಿಮ್ಮ ಮೊಬೈಲ್‌ಗೆ ಒಟಿಪಿ ಬರುತ್ತದೆ. ಒಟಿಪಿಯನ್ನು ನಮೂದಿಸಿದ ನಂತರ ಜಿಲ್ಲೆಯ 4 ಪ್ರವಾಸಿ ತಾಣಗಳನ್ನು ಆಯ್ಕೆ ಮಾಡುವ ಅವಕಾಶ ದೊರೆಯುತ್ತದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಈ ಅಭಿಯಾನದಲ್ಲಿ ಪಾಲ್ಗೊಂಡಿರುವುದಕ್ಕೆ ಡಿಜಿಟಲ್ ಸರ್ಟಿಫಿಕೇಟ್ ಸಹ ದೊರೆಯುತ್ತದೆ.

ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ‘ದೇಖೋ ಅಪ್ನಾ ದೇಶ್ : ಪೀಪಲ್ಸ್ ಚಾಯ್ಸ-2024’ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ಸಾರ್ವಜನಿಕರು ನಮ್ಮ ಜಿಲ್ಲೆಯ ನಾಲ್ಕು ಪ್ರವಾಸಿ ತಾಣಗಳನ್ನು ವೋಟಿಂಗ್ ಮೂಲಕ ಅಯ್ಕೆ ಮಾಡಿ ಕಳುಹಿಸಿದರೆ ಕೇಂದ್ರದಿಂದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅನುದಾನ ದೊರೆಯುತ್ತದೆ. ನಮ್ಮ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅನುದಾನ ಪಡೆಯಲು ಇದೊಂದು ಸುವರ್ಣಾವಕಾಶವಾಗಿದ್ದು, ಜಿಲ್ಲೆಯ ಜನರು ಸ್ವಯಂ ಪ್ರೇರಿತರಾಗಿ ವೋಟ್ ಮಾಡಬೇಕು. ಈ ಅಭಿಯಾನಕ್ಕೆ ಪ್ರವಾಸೋದ್ಯಮ ಸಂಸ್ಥೆಗಳು, ಹೋಟೆಲ್ ಉದ್ಯಮ, ವಿದ್ಯಾರ್ಥಿ ಸಮುದಾಯದಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.
ಎಂ.ಕೆ. ಸವಿತಾ, ಉಪ ನಿರ್ದೇಶಕಿ,
ಪ್ರವಾಸೋದ್ಯಮ ಇಲಾಖೆ

‘ದೇಖೋ ಅಪ್ನಾ ದೇಶ್ : ಪೀಪಲ್ಸ್ ಚಾಯ್ಸ-2024’ ಯೋಜನೆಯಡಿ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅನುದಾನ ಪಡೆಯುವ ಅವಕಾಶ ಇದ್ದು, ಸಾರ್ವಜನಿಕರು ತಪ್ಪದೆ ವೋಟ್ ಮಾಡಿ ಸಹಕರಿಸಬೇಕು. ಹೋಟೆಲ್ ಉದ್ಯಮದಿಂದ ಈಗಾಗಲೇ ವೋಟಿಂಗ್ ಮಾಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಈ ಯೋಜನೆಯಿಂದ ಜಿಲ್ಲೆಯ ಪ್ರವಾಸಿ ತಾಣಗಳು ಅಭಿವೃದ್ಧಿ ಕಾಣುವಂತಾಗಲಿ.
ನಾರಾಯಣ ಗೌಡ,
ಅಧ್ಯಕ್ಷ, ಜಿಲ್ಲಾ ಹೋಟೆಲ್ ಮಾಲೀಕರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net