

ಮಂಡ್ಯ: ಮತದಾನದ ಹಕ್ಕು ಹೊಂದಿರುವ ಪ್ರತಿಯೊಬ್ಬರೂ ಜವಾಬ್ದಾರಿ ಅರಿತು ಕಡ್ಡಾಯವಾಗಿ ಯೋಗ್ಯ ವ್ಯಕ್ತಿಗೆ ಮತದಾನ ಮಾಡುವುದರ ಜತೆಗೆ ಇನ್ನೊಬ್ಬರಿಗೂ ಪ್ರೇರೆಪಿಸಬೇಕು ಎಂದು ಜಿಲ್ಲಾ ಸ್ವೀಪ್ ಐಕಾನ್ ಚಿತ್ರನಟ ನೀನಾಸಂ ಸತೀಶ್ ಸಲಹೆ ನೀಡಿದರು.
ಮಂಡ್ಯ ವಿಶ್ವವಿದ್ಯಾಲಯ ಆವರಣದ ಶಾರದಾ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಮತದಾರರ ಪಾಲ್ಗೊಳ್ಳುವಿಕೆ(ಸ್ವೀಪ್) ಸಹಯೋಗದಲ್ಲಿ ಆಯೋಜಿಸಿದ್ದ ಮತದಾರರಿಗೆ ಜಾಗೃತಿ ಮೂಡಿಸುವ ಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉತ್ತಮ ಸಮಾಜ ಹಾಗೂ ರಾಷ್ಟ್ರ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಮತದಾನದಲ್ಲಿ ಕಡ್ಡಾಯವಾಗಿ ಭಾಗವಹಿಸಿ ಉತ್ತಮರನ್ನು ಆಯ್ಕೆ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಮೇ.10 ರಂದು ಮತದಾನ ನಡೆಯಲಿದೆ. ಅಂದು ಪ್ರಜ್ಞಾವಂತ ನಾಗರಿಕರು ಪ್ರಜ್ಞೆಯಿಂದ ಮತದಾನ ಮಾಡಿ. ಈ ರಾಜ್ಯದ ಭವಿಷ್ಯ ಬರೆಯಬೇಕು. ಬದಲಾವಣೆ ಮಾಡುವ ಶಕ್ತಿ ಮತದಾರರ ಕೈಯಲ್ಲಿದೆ. ಮತದಾನ ಮಾಡುವುದು ಹಕ್ಕು ಹಾಗೂ ಕರ್ತವ್ಯ. ಮತದಾನದ ಮಹತ್ವದ ಬಗ್ಗೆ ಜ್ಞಾನ ಹೆಚ್ಚಿಸಿಕೊಂಡು, ಸಮಾಜಕ್ಕೆ ಏನಾದರೂ ಒಳ್ಳೆಯದು ಮಾಡುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕಿದೆ ಎಂದರು.
ಯುವಕರು ಪ್ರಶ್ನೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಮಾನವಾದ ಹಕ್ಕಿದೆ ನಮ್ಮ ಸುತ್ತಮುತ್ತಲೂ ಇರುವ ಸಮಸ್ಯೆಗಳ ಬಗ್ಗೆ ಪರಿಹಾರ ಮಾಡುವ ನಿಟ್ಟಿನಲ್ಲಿ ಚಿಂತಿಸಬೇಕಿದೆ. ಜೀವನದಲ್ಲಿ ಗುರಿ ಇಟ್ಟುಕೊಳ್ಳಿ, ಉತ್ತಮ ವ್ಯಾಸಂಗ ಮಾಡುವ ಮೂಲಕ ಆ ಗುರಿ ಸಾಧಿಸಿ, ಸಮಾಜಕ್ಕೆ ನಮ್ಮಿಂದ ಏನಾದರೂ ಸಹಾಯ ಆಗಬೇಕು. ಆಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯ ಶೇಕಡಾವಾರು ಮತದಾನದಲ್ಲಿ ಮಂಡ್ಯ ಜಿಲ್ಲೆ ಎರಡನೇ ಸ್ಥಾನದಲ್ಲಿತ್ತು. ಈ ಬಾರಿ ಜಿಲ್ಲೆ ಪ್ರಥಮ ಸ್ಥಾನ ಪಡೆಯಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಈಗಾಗಲೇ ಮತದಾರರಲ್ಲಿ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ರಾಯಭಾರಿಗಳಾಗಿ ಚಲನಚಿತ್ರ ನಟ ನೀನಾಸಂ ಸತೀಶ್ ಹಾಗೂ ಅಂಗವಿಕಲ ರಾಯಭಾರಿಯಾಗಿ ಡಾ.ಚಲುವರಾಜ್ ಅವರನ್ನು ಆಯ್ಕೆ ಮಾಡಿಕೊಂಡು ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸುಶಿಕ್ಷಿತರೇ ಹಾಗೂ ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿರುವ ನಗರ ಪ್ರದೇಶಗಳಲ್ಲಿ ಶೇ.70 ರಷ್ಟು ಮತದಾನವಾಗುತ್ತಿದೆ. ಇಂತಹ ಕಡೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ ಚುನಾವಣೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ಪ್ರಜ್ಞಾವಂತ ನಾಗರಿಕರು ಕಡ್ಡಾಯವಾಗಿ ಮತ ಹಾಕುವ ಮೂಲಕ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ. ಮತಗಟ್ಟೆಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಮಂಡ್ಯ ವಿಶ್ವವಿದ್ಯಾಲಯ ಕುಲಪತಿ ಡಾ.ಪುಟ್ಟರಾಜು, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ವಿಶೇಷ ಚೇತನ ರಾಯಭಾರಿ ಡಾ.ಎಂ.ಎಸ್.ಚಲುವರಾಜು, ವಿಶ್ವವಿದ್ಯಾಲಯದ ಕುಲಸಚಿವ ಡಾ.ರಂಗರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಎನ್.ಧನಂಜಯ, ಡಿಡಿಪಿಐ ಎಸ್.ಟಿ.ಜವರೇಗೌಡ, ಜಿಲ್ಲಾ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ ಹಾಜರಿದ್ದರು.
ಇದೇ ವೇಳೆ ನೀನಾಸಂ ಸತೀಶ್ ಅವರು ಚಲನಚಿತ್ರ ಗೀತೆಗಳು ಹಾಗೂ ಸಿನಿಮಾ ಡೈಲಾಗ್‌ಗಳನ್ನು ಹೇಳಿ ವಿದ್ಯಾರ್ಥಿಗಳನ್ನು ರಂಜಿಸಿದರು. ಬಳಿಕ ಮತದಾನ ಜಾಗೃತಿಯ ಸಹಿ ಅಭಿಯಾನದಲ್ಲಿ ಪಾಲ್ಗೊಂಡರು. ನಂತರ ಮತದಾನದ ಸೆಲ್ಫಿ ಕ್ಲಿಕ್ಕಿಸಿಕೊಂಡಿ ಸಂಭ್ರಮಿಸಿದರು. ಇದಕ್ಕೂ ಮುನ್ನ ನಗರದ ರೋಟರಿ ಶಾಲೆ ಆವರಣದಲ್ಲಿ ಮತದಾನ ಜಾಗೃತಿಯ ಜಾಥಕ್ಕೆ ಹಸಿರು ನಿಶಾನೆ ತೋರಿಸಿದರು. ಅಂತೆಯೇ ಕಡ್ಡಾಯವಾಗಿ ಮತದಾನ ಮಾಡುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.